ಪಾಟ್ನಾ: 22 ವರ್ಷಗಳ ನಂತರ ಬಿಹಾರದ ಮತದಾರರ ಪಟ್ಟಿಯನ್ನು ವಿಶೇಷ ಸಮಗ್ರ ಪರಿಷ್ಕರಣೆ(SIR) ಮೂಲಕ "ಶುದ್ಧೀಕರಿಸಲಾಗಿದೆ" ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಭಾನುವಾರ ಹೇಳಿದ್ದಾರೆ.
ಇಂದು ಪಾಟ್ನಾದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕುಮಾರ್, ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗಾಗಿ ಅನೇಕ ಹೊಸ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಮತ್ತು ಇವುಗಳನ್ನು ಸರಿಯಾದ ಸಮಯದಲ್ಲಿ ದೇಶಾದ್ಯಂತ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.
ನೋಂದಣಿಯಾದ 15 ದಿನಗಳಲ್ಲಿ ಮತದಾರರಿಗೆ EPIC ಕಾರ್ಡ್‌ಗಳನ್ನು ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು ಹೊಸ SOP ಮತ್ತು ಮತಗಟ್ಟೆಗಳಲ್ಲಿ ಮೊಬೈಲ್ ಠೇವಣಿ ಸೌಲಭ್ಯ ಈ ಉಪಕ್ರಮ ಒಳಗೊಂಡಿವೆ ಎಂದು ಅವರು ಹೇಳಿದ್ದಾರೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಯ ಅವಧಿ ನವೆಂಬರ್ 22 ರಂದು ಮುಗಿಯಲಿದ್ದು, ಅದಕ್ಕೂ ಮೊದಲು ಚುನಾವಣೆ ನಡೆಯಲಿದೆ ಎಂದು ಅವರು ತಿಳಿಸಿದರು.
"ನಾವು 243 ಕ್ಷೇತ್ರಗಳಲ್ಲಿ ಪ್ರತಿಯೊಂದರಲ್ಲೂ ERO (ಚುನಾವಣಾ ನೋಂದಣಿ ಅಧಿಕಾರಿ) ಯನ್ನು ಹೊಂದಿದ್ದೇವೆ. SIR ಪೂರ್ಣಗೊಳಿಸಲು ಅವರಿಗೆ 90,207 BLO ಗಳು ಸಹಾಯ ಮಾಡಿದ್ದಾರೆ. ಇದು 22 ವರ್ಷಗಳ ನಂತರ ಮತದಾರರ ಪಟ್ಟಿಯನ್ನು ಶುದ್ಧೀಕರಿಸಿದೆ" ಎಂದು ಅವರು ಹೇಳಿದರು.
ರಾಜ್ಯದಲ್ಲಿ ಕೊನೆಯ ಬಾರಿಗೆ ಮತದಾರರ ಪಟ್ಟಿಯನ್ನು 2003 ರಲ್ಲಿ ಸಮಗ್ರ ಪರಿಷ್ಕರಣೆ ಮಾಡಲಾಗಿತ್ತು.