ಮೈನ್‌ಪುರಿ: ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ಗೋಪಾಲ್‌ಪುರ ಗ್ರಾಮದಲ್ಲಿ ವರದಕ್ಷಿಣೆಗೆ ಪೀಡಿಸಿ 21 ವರ್ಷದ ಗರ್ಭಿಣಿಯನ್ನು ಆಕೆಯ ಪತಿ ಮತ್ತು ಮಾವಂದಿರು ಹೊಡೆದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಂಗ್‌ಪುರ್ ಗ್ರಾಮದ ನಿವಾಸಿ ರಜನಿ ಕುಮಾರಿ ಈ ವರ್ಷದ ಏಪ್ರಿಲ್‌ನಲ್ಲಿ ಸಚಿನ್ ಅವರನ್ನು ವಿವಾಹವಾಗಿದ್ದರು. ರಜನಿ ಅವರ ಪತಿ, ಅವರ ಸಹೋದರರಾದ ಪ್ರಾಂಶು ಮತ್ತು ಸಹಬಾಗ್ ಮತ್ತು ಸಂಬಂಧಿಕರಾದ ರಾಮ್ ನಾಥ್, ದಿವ್ಯಾ ಮತ್ತು ಟೀನಾ ಅವರು ಟೆಂಟ್ ಹೌಸ್ ತೆರೆಯಲು 5 ಲಕ್ಷ ರೂಪಾಯಿ ಹೆಚ್ಚುವರಿ ಹಣ ಬೇಕೆಂದು ಪೀಡಿಸುತ್ತಿದ್ದರು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ರಾಹುಲ್ ಮಿಥಾಸ್ ತಿಳಿಸಿದ್ದಾರೆ.
ಬೇಡಿಕೆ ಈಡೇರದಿದ್ದಾಗ, ಆರೋಪಿಗಳು ಮೊನ್ನೆ ಶುಕ್ರವಾರ ರಜನಿ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ, ಸಾಯಿಸಿದ್ದಾರೆ. ನಂತರ ಸಾಕ್ಷ್ಯಗಳನ್ನು ನಾಶಪಡಿಸಲು ಯತ್ನಿಸಿ ಶವವನ್ನು ಹೊಲದಲ್ಲಿ ಸುಟ್ಟು ಹಾಕಿದ್ದಾರೆ.
ಘಟನೆ ಬಗ್ಗೆ ತಿಳಿದ ನಂತರ ರಜನಿ ಅವರ ತಾಯಿ ಸುನೀತಾ ದೇವಿ ನಿನ್ನೆ ಒಂಚಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಜನಿ ಪತಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಆರೋಪಿಗಳನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಎಎಸ್‌ಪಿ ಮಿಥಾಸ್ ಹೇಳಿದ್ದಾರೆ.