ಬಿಂಜಾರ್ಪುರ/ಬರಿ: ಒಡಿಶಾದ ಜಾಜ್ಪುರ ಜಿಲ್ಲೆಯ ಬಾರಿ ಬ್ಲಾಕ್‌ನ ಬೋಡುವಾ ಪಂಚಾಯತ್‌ನ ಕಾಂಟಿಯಾ ಗ್ರಾಮದ ಬಳಿ ಖರಸ್ರೋಟ ನದಿಗೆ ಬಟ್ಟೆ ಒಗೆಯಲು ಹೋಗಿದ್ದ ಮಹಿಳೆಯೊಬ್ಬರನ್ನು ಮೊಸಳೆ ಎಳೆದೊಯ್ದ ಘಟನೆ ನಡೆದಿದೆ. ಮೃತಳನ್ನು ಕಾಂಟಿಯಾ ಗ್ರಾಮದ ಸುಕ್ದೇವ್ ಮಹಾಲಾ ಅವರ ಪತ್ನಿ 55 ವರ್ಷದ ಸೌದಾಮಿನಿ ಮಹಾಲಾ ಎಂದು ಗುರುತಿಸಲಾಗಿದೆ. ಸ್ಥಳೀಯರ ಪ್ರಕಾರ, ನದಿ ದಂಡೆಯಲ್ಲಿ ಅಡಗಿಕೊಂಡಿದ್ದ ಮೊಸಳೆ ಇದ್ದಕ್ಕಿದ್ದಂತೆ ಆಕೆಯ ಮೇಲೆ ಹಾರಿ ನೀರಿನೊಳಕ್ಕೆ ಎಳೆದೊಯ್ದಿದೆ. ಆಕೆಯ ಕಿರುಚಾಟ ಕೇಳಿ ಸ್ಥಳಕ್ಕೆ ಗ್ರಾಮಸ್ಥರು ಧಾವಿಸಿದ್ದರು. ಅಷ್ಟರಲ್ಲಾಗಲೇ ಮೊಸಳೆ ಆಕೆಯನ್ನು ನದಿಯೊಳಗೆ ಎಳೆದೊಯ್ದಿತ್ತು. ಇದನ್ನು ವ್ಯಕ್ತಿಯೊಬ್ಬರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಶೋಧ ಕಾರ್ಯಾಚರಣೆ ಆರಂಭಿಸಿದರು. ಆದರೆ ಮಹಿಳೆಯ ಮೃತದೇಹ ಪತ್ತೆಯಾಗಲಿಲ್ಲ. ಬಿಂಜಾರ್ಪುರ ಮತ್ತು ಬರಿ ಪ್ರದೇಶಗಳಲ್ಲಿ ನದಿಯ ಎರಡೂ ದಡಗಳಲ್ಲಿರುವ ನಿವಾಸಿಗಳು ಈಗ ಭಯದಿಂದ ಬದುಕುತ್ತಿದ್ದಾರೆ. ಕೇವಲ ಒಂದು ತಿಂಗಳ ಹಿಂದೆ ಮೊಸಳೆಯೊಂದು ಅದೇ ನದಿ ದಂಡೆಯಲ್ಲಿ ಹಸುವನ್ನು ಎಳೆದೊಯ್ದಿತ್ತು.