ಬಿಲಾಸ್‌ಪುರ: ಹಿಮಾಚಲ ಪ್ರದೇಶದ ಬಿಲಾಸ್‌ಪುರ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಭಾರಿ ಭೂಕುಸಿತ ಸಂಭವಿಸಿದ್ದು, ಖಾಸಗಿ ಬಸ್ ಮೇಲೆ ಪರ್ವತ ಬಿದ್ದು ಕನಿಷ್ಠ 18 ಜನ ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
30 ರಿಂದ 35 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್, ಮರೋಟನ್‌ನಿಂದ ಘುಮಾರ್ವಿನ್‌ಗೆ ತೆರಳುತ್ತಿತ್ತು. ಈ ವೇಳೆ ಝಂಡುಟ್ಟಾ ವಿಧಾನಸಭಾ ವಿಭಾಗದ ಭಾಲುಘಾಟ್ ಪ್ರದೇಶದಲ್ಲಿ ಬಸ್ ಮೇಲೆಯೇ ಗುಡ್ಡ ಕುಸಿದಿದೆ.
ಇಲ್ಲಿಯವರೆಗೆ 18 ಶವಗಳನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ. ಮೂವರನ್ನು ರಕ್ಷಿಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಮತ್ತು ಜಿಲ್ಲಾಡಳಿತ ಅಧಿಕಾರಿಗಳು ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಇಡೀ ಪರ್ವತವೇ ಬಸ್ ಮೇಲೆ ಬಿದ್ದಿದ್ದರಿಂದ ಪ್ರಯಾಣಿಕರು ಬದುಕುಳಿಯುವ ಸಾಧ್ಯತೆಗಳು ಕಡಿಮೆ" ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸೋಮವಾರದಿಂದ ಈ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದೆ.
ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಮತ್ತು ಉಪಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ ಅಪಘಾತದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. "ಬಿಲಾಸ್ಪುರ್ ಜಿಲ್ಲೆಯ ಝಂಡುತಾ ವಿಧಾನಸಭಾ ಕ್ಷೇತ್ರದ ಬಾಲುಘಾಟ್(ಭಲ್ಲಾ ಸೇತುವೆ) ಬಳಿ ಸಂಭವಿಸಿದ ಭೀಕರ ಭೂಕುಸಿತದ ಸುದ್ದಿ ನನ್ನನ್ನು ತುಂಬಾ ಆಘಾತಗೊಳಿಸಿದೆ" ಎಂದು ಸಿಎಂ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಅಧಿಕಾರಿಗಳಿಗೆ ಸಂಪೂರ್ಣ ಯಂತ್ರೋಪಕರಣಗಳನ್ನು ನಿಯೋಜಿಸಲು ಸೂಚನೆ ನೀಡಲಾಗಿದೆ. "ನಾನು ಸ್ಥಳೀಯ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಮತ್ತು ಸಂಪೂರ್ಣ ರಕ್ಷಣಾ ಕಾರ್ಯಾಚರಣೆಯ ಕುರಿತು ಕ್ಷಣ ಕ್ಷಣಕ್ಕೂ ಮಾಹಿತಿ ಪಡೆಯುತ್ತಿದ್ದೇನೆ" ಎಂದು ಅವರು ಹೇಳಿದ್ದಾರೆ.