ಗುವಾಹಟಿ: ಇತ್ತೀಚೆಗೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಗಾಯಕ ಜುಬಿನ್ ಗಾರ್ಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂ ಪೊಲೀಸ್ ಡಿಎಸ್ ಪಿಯನ್ನು ವಶಕ್ಕೆ ಪಡೆಯಲಾಗಿದೆ.
ಅಸ್ಸಾಂ ಪೊಲೀಸ್ ಸೇವೆಯ ಅಧಿಕಾರಿ ಮತ್ತು ದಿವಂಗತ ಗಾಯಕ ಜುಬೀನ್ ಗಾರ್ಗ್ ಅವರ ಸೋದರ ಸಂಬಂಧಿ ಸಂದೀಪನ್ ಗಾರ್ಗ್ ಅವರನ್ನು ಅಸ್ಸಾಂ ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ) ಬಂಧಿಸಿದೆ. ಸಂದೀಪನ್ ಕಳೆದ ಐದು ದಿನಗಳಿಂದ ಪ್ರತಿದಿನ ಅಸ್ಸಾಂನ ಅಪರಾಧ ತನಿಖಾ ಇಲಾಖೆ (ಸಿಐಡಿ) ಕಚೇರಿಯಲ್ಲಿ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುತ್ತಿದ್ದರು.
ಬುಧವಾರ ಬೆಳಿಗ್ಗೆ 10:30 ರ ಸುಮಾರಿಗೆ ಸಿಐಡಿ ಕಚೇರಿಗೆ ಬಂದ ಸ್ವಲ್ಪ ಸಮಯದ ನಂತರ ಸಂದೀಪನ್ ಅವರನ್ನು ಬಂಧಿಸಲಾಯಿತು. ಸಿಐಡಿ ಮೂಲಗಳು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ 14 ದಿನಗಳ ಕಸ್ಟಡಿಗೆ ಕೋರುವುದಾಗಿ ತಿಳಿಸಿವೆ.
ಸೆಪ್ಟೆಂಬರ್ 19 ರಂದು ಸಿಂಗಾಪುರದಲ್ಲಿ ಸಮುದ್ರದಲ್ಲಿ ಜುಬಿನ್ ಗಾರ್ಗ್ ಈಜುತ್ತಿದ್ದಾಗ ನಿಗೂಢವಾಗಿ ಸಾವನ್ನಪ್ಪಿದ್ದರು. ಈ ಸಂದರ್ಭದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಆಗಿ ಸೇವೆ ಸಲ್ಲಿಸುತ್ತಿದ್ದ ಸಂದೀಪನ್ ಅವರು ದೋಣಿಯಲ್ಲಿದ್ದರು ಎಂದು ಹೇಳಲಾಗಿದೆ. ಇದು ಸಂದೀಪನ್ ಅವರ ಮೊದಲ ವಿದೇಶ ಪ್ರವಾಸ ಎಂದು ವರದಿಯಾಗಿದೆ.
ಅಸ್ಸಾಂ ಅಸೋಸಿಯೇಷನ್ ಸಿಂಗಾಪುರದ ಸದಸ್ಯ ಮತ್ತು ಅನಿವಾಸಿ ಭಾರತೀಯ ರೂಪಕಮಲ್ ಕಲಿತಾ ಬುಧವಾರ ಸತತ ಎರಡನೇ ದಿನವೂ ಸಿಐಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಮಂಗಳವಾರ ಅವರನ್ನು ಆರು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಯಿತು.
ಜುಬೀನ್ ನಿಧನರಾದ ಆ ದುರದೃಷ್ಟಕರ ದಿನದಂದು ಕಲಿತಾ ಸಿಂಗಾಪುರದಲ್ಲಿ ದೋಣಿಯಲ್ಲಿದ್ದರು ಎಂದು ಆರೋಪಿಸಲಾಗಿದೆ. ಸಿಂಗಾಪುರ ಮೂಲದ ಇತರ ಏಳು ಅಸ್ಸಾಮಿ ಸಾಕ್ಷಿಗಳು ಸಿಐಡಿ ಸಮನ್ಸ್‌ಗೆ ಇನ್ನೂ ಪ್ರತಿಕ್ರಿಯಿಸಿಲ್ಲ ಎನ್ನಲಾಗಿದೆ.
ಈವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಜನರನ್ನು ಬಂಧಿಸಲಾಗಿದ್ದು, ಬಂಧಿತರಾದ ಇತರ ನಾಲ್ವರು ವ್ಯಕ್ತಿಗಳು ಸಿಂಗಾಪುರದಲ್ಲಿ ನಡೆದ 4 ನೇ ಈಶಾನ್ಯ ಭಾರತ ಉತ್ಸವದ ಆಯೋಜಕರಾದ ಶ್ಯಾಮಕಾನು ಮಹಾಂತ; ಜುಬೀನ್ ಅವರ ವ್ಯವಸ್ಥಾಪಕ ಸಿದ್ಧಾರ್ಥ್ ಶರ್ಮಾ; ಅವರ ಬ್ಯಾಂಡ್‌ಮೇಟ್ ಶೇಖರ್ ಜ್ಯೋತಿ ಗೋಸ್ವಾಮಿ; ಮತ್ತು ಗಾಯಕ ಅಮೃತ್ ಪ್ರಭಾ ಮಹಾಂತ ಎಂದು ಗುರುತಿಸಲಾಗಿದೆ.ಈ ಉತ್ಸವದಲ್ಲಿ ಭಾಗವಹಿಸಲು ಜುಬೀನ್ ಸಿಂಗಾಪುರಕ್ಕೆ ಪ್ರಯಾಣ ಬೆಳೆಸಿದ್ದರು.