ಪಾಟ್ನಾ: ಎರಡು ಹಂತಗಳ ಬಿಹಾರ ವಿಧಾನಸಭೆ ಚುನಾವಣೆ ಸುಗಮವಾಗಿ ಮತ್ತು ಕ್ರಮಬದ್ಧವಾಗಿ ನಡೆಯುವಂತೆ ನೋಡಿಕೊಳ್ಳಲು ಸುಮಾರು 8.5 ಲಕ್ಷ ಚುನಾವಣಾ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ(ECI) ಗುರುವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ನವೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ.
ನವೆಂಬರ್ 6 ರಂದು 121 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯಲಿದ್ದು, ನವೆಂಬರ್ 11 ರಂದು ಎರಡನೇ ಹಂತದಲ್ಲಿ ಉಳಿದ 122 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ.
ನಿಯೋಜಿಸಲಾಗುವ ಸಿಬ್ಬಂದಿಯಲ್ಲಿ ಸುಮಾರು 4.53 ಲಕ್ಷ ಮತದಾನ ಸಿಬ್ಬಂದಿ, 2.5 ಲಕ್ಷ ಪೊಲೀಸ್ ಅಧಿಕಾರಿಗಳು, 28,370 ಎಣಿಕೆ ಸಿಬ್ಬಂದಿ, 17,875 ಮೈಕ್ರೋ ವೀಕ್ಷಕರು, 9,625 ಸೆಕ್ಟರ್ ಅಧಿಕಾರಿಗಳು, ಎಣಿಕೆಗಾಗಿ 4,840 ಮೈಕ್ರೋ ವೀಕ್ಷಕರು ಮತ್ತು 90,712 ಅಂಗನವಾಡಿ ಸೇವಾಕರ್ತರನ್ನು ಸಹ ನಿಯೋಜಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.