ನವದೆಹಲಿ: ಅಫ್ಘಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರ ಪತ್ರಿಕಾಗೋಷ್ಠಿಯಿಂದ ಮಹಿಳಾ ಪತ್ರಕರ್ತರನ್ನು ಹೊರಗಿಟ್ಟ ವಿವಾದದ ಬಗ್ಗೆ ತಾಲಿಬಾನ್ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಪತ್ರಿಕಾಗೋಷ್ಠಿಗೆ ಯಾವುದೇ ಮಹಿಳಾ ಪತ್ರಕರ್ತರನ್ನು ತಡೆಯಲಿಲ್ಲ ಎಂದು ಹೇಳುವ ಮೂಲಕ ತಾಲಿಬಾನ್ ಈ ವಿಷಯವನ್ನು ತಳ್ಳಿಹಾಕಿದೆ. ಅಲ್ಲದೆ ಪತ್ರಿಕಾಗೋಷ್ಠಿಯಲ್ಲಿ ಭಾರತದ ಯಾವುದೇ ಹಸ್ತಕ್ಷೇಪವಿಲ್ಲ ಎಂದು ಭಾರತ ಈಗಾಗಲೇ ಸ್ಪಷ್ಟಪಡಿಸಿದೆ.
ಎರಡು ದಿನಗಳ ಹಿಂದೆ ತಮ್ಮ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರ ಅನುಪಸ್ಥಿತಿಯ ಕುರಿತಾದ ವಿವಾದಕ್ಕೆ ಅಫ್ಘಾನಿಸ್ತಾನ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಪ್ರತಿಕ್ರಿಯಿಸಿದ್ದು ಇದು "ತಾಂತ್ರಿಕ ಸಮಸ್ಯೆ" ಹೊರತು ಉದ್ದೇಶಪೂರ್ವಕವಲ್ಲ ಎಂದು ಹೇಳಿದರು. "ಪತ್ರಿಕಾಗೋಷ್ಠಿಗೆ ಸಂಬಂಧಿಸಿದಂತೆ ಇದು ಅಲ್ಪಾವಧಿಯ ಸೂಚನೆಯಾಗಿತ್ತು. ಇನ್ನು ಪತ್ರಕರ್ತರ ಸಣ್ಣ ಪಟ್ಟಿಯನ್ನು ನಿರ್ಧರಿಸಲಾಗಿತ್ತು. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತರಿಗೆ ಆಹ್ವಾನ ನೀಡಲು ಸಾಧ್ಯವಾಗಿರಲಿಲ್ಲ ಎಂದು ಅಮೀರ್ ಖಾನ್ ಮುತ್ತಕಿ ಸ್ಪಷ್ಟಪಡಿಸಿದರು.
ಪತ್ರಕರ್ತರನ್ನು ಪತ್ರಿಕಾಗೋಷ್ಠಿಯಿಂದ ಹೊರಗಿಡುವ ವಿಷಯದ ಕುರಿತು, ತಾಲಿಬಾನ್ ರಾಜಕೀಯ ಮುಖ್ಯಸ್ಥ ಸುಹೇಲ್ ಶಾಹಿ ಸ್ಪಷ್ಟಪಡಿಸಿದರು. ನಾವು ಯಾವುದೇ ಮಹಿಳಾ ಪತ್ರಕರ್ತರನ್ನು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸುವುದನ್ನು ತಡೆಯಲಿಲ್ಲ. ಇದರಲ್ಲಿ ತಾಲಿಬಾನ್‌ಗೆ ಯಾವುದೇ ಪಾತ್ರವಿರಲಿಲ್ಲ. ನಮ್ಮ ಬಗ್ಗೆ ಬಹಳಷ್ಟು ಹೇಳಲಾಗುತ್ತಿದೆ ಆದರೆ ಅದರಲ್ಲಿ ಯಾವುದೇ ಸತ್ಯವಿಲ್ಲ. ಅಫ್ಘಾನಿಸ್ತಾನದಲ್ಲಿ ಮಹಿಳಾ ಪತ್ರಕರ್ತರ ಮೇಲೆ ಯಾವುದೇ ನಿರ್ಬಂಧಗಳಿಲ್ಲ. ಮಹಿಳೆಯರು ಇಲ್ಲಿಯೂ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಾರೆ. ಮುತ್ತಕಿ ಸ್ವತಃ ಮಹಿಳಾ ಪತ್ರಕರ್ತರನ್ನು ನಿಯಮಿತವಾಗಿ ಭೇಟಿಯಾಗುತ್ತಾರೆ ಮತ್ತು ಅವರ ಪ್ರಶ್ನೆಗಳಿಗೆ ಉತ್ತರಿಸಲು ಯಾವಾಗಲೂ ಸಿದ್ಧರಿರುತ್ತಾರೆ. ಹಾಗಾದರೆ ಭಾರತದಲ್ಲಿ ಮಹಿಳೆಯ ಪ್ರಶ್ನೆಗೆ ಅವರು ಏಕೆ ಆಕ್ಷೇಪಿಸುತ್ತಾರೆ?
ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರಿಗೆ ಅವಕಾಶ ನೀಡದಿರುವುದು ಪ್ರತಿಯೊಬ್ಬ ಭಾರತೀಯ ಮಹಿಳೆಗೆ ಮಾಡಿದ ಅವಮಾನ ಮತ್ತು ಸ್ವೀಕಾರಾರ್ಹವಲ್ಲ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಈ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸಿವೆ. ಮಹಿಳಾ ಸಬಲೀಕರಣದ ಕುರಿತು ಪ್ರಧಾನಿ ಮೋದಿ ಅವರ ಘೋಷಣೆಗಳ ಪೊಳ್ಳುತನ ಬಯಲಾಗಿದೆ ಎಂದು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.