ಶ್ರೀನಗರ: ತಾಲಿಬಾನ್ ಆಳ್ವಿಕೆಯ ಅಫ್ಘಾನಿಸ್ತಾನವನ್ನು ಅಪ್ಪಿಕೊಳ್ಳುವುದು ಮತ್ತು ಭಾರತದೊಳಗಿನ ಮುಸ್ಲಿಮರನ್ನು 'ಗುರಿ' ಮಾಡುವುದು ಪಕ್ಷದ 'ಆಂತರಿಕ ಬೂಟಾಟಿಕೆ'ಯನ್ನು ತೋರಿಸುತ್ತದೆ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಭಾನುವಾರ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಭಾರತವು ಅಫ್ಗಾನಿಸ್ತಾನದೊಂದಿಗಿನ ತನ್ನ ರಾಜತಾಂತ್ರಿಕ ಸಂಬಂಧವನ್ನು ಬಲಪಡಿಸಲು ಕೆಲಸ ಮಾಡುತ್ತಿರುವಾಗ ಮತ್ತು ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಭಾರತಕ್ಕೆ ಭೇಟಿ ನೀಡುತ್ತಿರುವ ವೇಳೆ ಈ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ.
'ಲವ್ ಜಿಹಾದ್', 'ಲ್ಯಾಂಡ್ ಜಿಹಾದ್', 'ವೋಟ್ ಜಿಹಾದ್' ಮತ್ತು 'ಕೌ ಜಿಹಾದ್' ಹೆಸರಿನಲ್ಲಿ, ಬಿಜೆಪಿ ತನ್ನ ದೇಶದೊಳಗಿನ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಅವರನ್ನು ರಾಕ್ಷಸೀಕರಿಸುವ ನಿರೂಪಣೆಗಳನ್ನು ಪ್ರಚಾರ ಮಾಡುತ್ತಿದೆ. ಅದೇ ಸಮಯದಲ್ಲಿ, ಭಾರತ ಜಿಹಾದ್‌ನ ಓಲೆಕಾರ ತಾಲಿಬಾನ್ ಜೊತೆಗೆ ಸಂಬಂಧ ಬೆಳೆಸಲು ನಿರ್ಧರಿಸಿದೆ' ಎಂದು ಅವರು X ನಲ್ಲಿನ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ.
ಅಫ್ಗಾನಿಸ್ತಾನದ ಪುನರ್ ನಿರ್ಮಾಣಕ್ಕೆ ಭಾರತವು ಅಲ್ಲಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿದ್ಯಾರ್ಥಿ ವೇತನವನ್ನು ನೀಡುವುದು ಸೇರಿದಂತೆ ಎಲ್ಲ ರೀತಿಯ ಸಹಾಯ ಮಾಡಲು ಮುಂದಾಗಿದೆ. ಅಫ್ಗಾನಿಸ್ತಾನದೊಂದಿಗೆ ಉತ್ತಮ ಸಂಬಂಧ ಹೊಂದುವುದು ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವದ್ದಾಗಿದ್ದರೂ, ಇದು ಸ್ಪಷ್ಟವಾದ ವಿರೋಧಾಭಾಸವನ್ನು ಹುಟ್ಟುಹಾಕುತ್ತದೆ. ರಾಷ್ಟ್ರದ ಸ್ವಾತಂತ್ರ್ಯ, ಗುರುತು ಮತ್ತು ಪ್ರಗತಿಗೆ ಕೊಡುಗೆ ನೀಡಿದ ಭಾರತದ ಮುಸ್ಲಿಂ ಸಮುದಾಯವನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡಲಾಗುತ್ತಿದೆ' ಎಂದು ಪಿಡಿಪಿ ಅಧ್ಯಕ್ಷೆ ಆರೋಪಿಸಿದರು.
ಬಿಜೆಪಿಯು ಮುಸ್ಲಿಂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ರದ್ದುಗೊಳಿಸುವುದು ಮತ್ತು ಮದರಸಾಗಳನ್ನು ಮುಚ್ಚುವುದು 'ಈ ಆಂತರಿಕ ಬೂಟಾಟಿಕೆಯನ್ನು ಸ್ಪಷ್ಟವಾಗಿ ನೆನಪಿಸುತ್ತದೆ' ಎಂದು ಅವರು ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ, ಅಂತರರಾಷ್ಟ್ರೀಯ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಆದರೆ, ಸ್ಥಿರ ಮತ್ತು ಸಾಮರಸ್ಯದ ರಾಷ್ಟ್ರದ ಅಡಿಪಾಯವು ತನ್ನ ನೆಲದಲ್ಲಿ, ವಿಶೇಷವಾಗಿ ಅದರ ಅಲ್ಪಸಂಖ್ಯಾತ ಸಮುದಾಯದೊಂದಿಗೆ ನಂಬಿಕೆ, ಗೌರವ ಮತ್ತು ಸಮಾನತೆಯನ್ನು ಬೆಳೆಸುವಲ್ಲಿದೆ ಎಂದು ಹೇಳಿದರು.
'ಬುಲ್ಡೋಜರ್ ಬಾಬಾ ಕೇಳುತ್ತಿದ್ದಾರೆಂದು ಭಾವಿಸುತ್ತೇನೆ!' ಎಂದು ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಉಲ್ಲೇಖಿಸಿ ಟೀಕಿಸಿದರು.