ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು 'ನುಸುಳುಕೋರ' ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭಾನುವಾರ ಕರೆದಿದ್ದು, ಅವರನ್ನು ಉತ್ತರಾಖಂಡಕ್ಕೆ ವಾಪಸ್ ಕಳುಹಿಸಬೇಕು ಎಂದು ಹೇಳಿದ್ದಾರೆ.
ಲಖನೌದ ಲೂಹಿಯಾ ಪಾರ್ಕ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲೇಶ್ ಯಾದವ್, ವಲಸಿಗರ ಕುರಿತ ಬಿಜೆಪಿಯವರ ಬಳಿ ಇರುವ ಅಂಕಿಅಂಶಗಳು ನಕಲಿಯಾಗಿವೆ. ಅವರ ಅಂಕಿಅಂಶ ನಂಬುವವರು ದಾರಿ ತಪ್ಪುತ್ತಾರೆ ಎಂದು ಟೀಕಿಸಿದ್ದಾರೆ.
ಬಿಜೆಪಿಯವರು ವಲಸಿಗರ ಕುರಿತು ತಪ್ಪು ಅಂಕಿಅಂಶಗಳನ್ನು ಕೊಡುವುದಾದರೆ ಉತ್ತರ ಪ್ರದೇಶದಲ್ಲೂ ನಾವು ನುಸುಳುಕೋರರನ್ನು ಕಾಣಬಹುದು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉತ್ತರಾಖಂಡದವರು. ಅವರನ್ನು ಅಲ್ಲಿಗೆ ವಾಪಸ್ ಕಳುಹಿಸಬೇಕೆಂದು ನಾವು ಬಯಸುತ್ತೇವೆ. ಸೈದ್ಧಾಂತಿಕ ದೃಷ್ಟಿಕೋನದಿಂದಲೂ ಅವರೊಬ್ಬ ನುಸುಳುಕೋರ ಎಂದರು.
ಆದಿತ್ಯನಾಥ್ ಅವರು ಬಿಜೆಪಿಯ ಸದಸ್ಯರಾಗಿರಲಿಲ್ಲ. ಅವರು ಇನ್ನೊಂದು ಪಕ್ಷದ ಸದಸ್ಯರಾಗಿದ್ದರು. ಪಕ್ಷಕ್ಕೆ ನುಸುಳಿದ ಅವರನ್ನು ಯಾವಾಗ ಹೊರಹಾಕಲಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನುಸುಳುಕೋರರ ಬಗ್ಗೆ ಹೇಳಿಕೆ ನೀಡಿದ್ದರ ಬೆನ್ನಲ್ಲೇ ಅಖಿಲೇಶ್ ಯಾದವ್ ಈ ರೀತಿಯ ಮಾತುಗಳನ್ನಾಡಿದ್ದಾರೆ.