ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣಾ ಕಣ ರಂಗೇರುತ್ತಿದ್ದು, ವಿರೋಧ ಪಕ್ಷಗಳ ಮೈತ್ರಿಕೂಟ ಮಹಾಘಟಬಂಧನದ ಭಾಗವಾದ ಸಿಪಿಐ(ಎಂಎಲ್)ಎಲ್ ಪಕ್ಷವು ಬಾಲಿವುಡ್ ನಟ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ದಿವ್ಯಾ ಗೌತಮ್ ಅವರಿಗೆ ಟಿಕೆಟ್ ನೀಡಲು ನಿರ್ಧರಿಸಿದೆ.
ಸಿಪಿಐ(ಎಂಎಲ್)ಎಲ್, ದಿವ್ಯಾ ಅವರನ್ನು ಪಾಟ್ನಾ ಜಿಲ್ಲೆಯ ದಿಘಾ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸುತ್ತಿದೆ.
ಸಿಪಿಐ(ಎಂಎಲ್)ಎಲ್ ನ ವಿದ್ಯಾರ್ಥಿ ವಿಭಾಗವಾದ ಎಐಎಸ್ಎ ಜೊತೆ ನಂಟು ಹೊಂದಿರುವ ಕಾರ್ಯಕರ್ತೆ ದಿವ್ಯಾ ಅವರು ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ದೃಢಪಡಿಸಿದ್ದಾರೆ.
"ಸಿಪಿಐ(ಎಂಎಲ್) ಎಲ್ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ದಿವ್ಯಾ ಅವರು, ಅಕ್ಟೋಬರ್ 15 ರಂದು ನಾಮಪತ್ರ ಸಲ್ಲಿಸಲಿದ್ದಾರೆ" ಎಂದು ಸಿಪಿಐ(ಎಂಎಲ್)ಎಲ್ ನಾಯಕರೊಬ್ಬರು ತಿಳಿಸಿದ್ದಾರೆ.
ಬಿಹಾರ ಮೂಲದ ಸುಶಾಂತ್ ಸಿಂಗ್ ರಜಪೂತ್ ಅವರು ಜೂನ್ 14, 2020 ರಂದು ಮುಂಬೈನ ತಮ್ಮ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.