ಪಾಟ್ನಾ: ಬಿಹಾರದ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ(ಎನ್ ಡಿಎ) ಮುಂಬರುವ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯನ್ನು ಸೋಮವಾರ ಮುಂದೂಡಿದೆ ಎಂದು ವರದಿಯಾಗಿದೆ.
ಸೀಟು ಹಂಚಿಕೆ ವ್ಯವಸ್ಥೆ ಮತ್ತು ಸೀಟು ಹಂಚಿಕೆ ಬಗ್ಗೆ ಮಿತ್ರಪಕ್ಷಗಳಲ್ಲಿ ಹೆಚ್ಚುತ್ತಿರುವ ಅಸಮಾಧಾನದಿಂದಾಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ಎನ್‌ಡಿಎಯ ಮೂಲಗಳು ತಿಳಿಸಿವೆ.
ಸೀಟು ಹಂಚಿಕೆ ಸೂತ್ರದ ಬಗ್ಗೆ ಎರಡು ಸಣ್ಣ ಮಿತ್ರಪಕ್ಷಗಳಾದ ಎಚ್‌ಎಎಂ ಮತ್ತು ಆರ್‌ಎಲ್‌ಎಂ ಭಾನುವಾರ ಸಂಜೆ ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ ನಂತರ ಈ ಮುಂದೂಡಿಕೆ ಮಾಡಲಾಗಿದೆ.
ನಿರ್ದಿಷ್ಟ ಸ್ಥಾನಗಳ ಬಗ್ಗೆ ಬಿಜೆಪಿ ಮತ್ತು ಜನತಾದಳ-ಯುನೈಟೆಡ್(ಜೆಡಿಯು) ನಡುವೆ ಹೆಚ್ಚುತ್ತಿರುವ ಭಿನ್ನಾಭಿಪ್ರಾಯಗಳು ಸಹ ಇದಕ್ಕೆ ಕಾರಣ ಎನ್ನಲಾಗಿದೆ.
ಇಂದು ಸಂಜೆ 4 ಗಂಟೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಎನ್‌ಡಿಎ ಆರಂಭದಲ್ಲಿ ಘೋಷಿಸಿತ್ತು. ಆದರೆ ಇದೀಗ ಅದನ್ನು ಮುಂದೂಡಲಾಗಿದೆ.
ಇದಕ್ಕೂ ಮೊದಲು, ಬಿಜೆಪಿ ಮತ್ತು ಜೆಡಿ-ಯು ನಾಯಕರು ಎನ್‌ಡಿಎ ಅಭ್ಯರ್ಥಿಗಳ ಹೆಸರುಗಳನ್ನು ಬಿಡುಗಡೆ ಮಾಡುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಪಟ್ಟಿ ಬಿಡುಗಡೆ ಮುಂದೂಡಿಕೆಯಾಗುತ್ತಿದ್ದು, ಅವರು ತಮ್ಮ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದಾರೆ.
ಈ ಮಧ್ಯೆ, ಬಿಹಾರ ಬಿಜೆಪಿ ಅಧ್ಯಕ್ಷ ದಿಲೀಪ್ ಜೈಸ್ವಾಲ್ ಅವರು ಮಂಗಳವಾರ ಸಂಜೆ ಎನ್‌ಡಿಎ ತನ್ನ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಲಿದೆ ಎಂದು ಹೇಳಿದ್ದಾರೆ.