ಕೋಲ್ಕತಾ: ಪಶ್ಚಿಮ ಬಂಗಾಳ "ಔರಂಗಜೇಬನ ಆಳ್ವಿಕೆಯಲ್ಲಿದೆ" ಎಂದು ಟೀಕಿಸಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದ ದುರ್ಗಾಪುರ ಅತ್ಯಾಚಾರ ಸಂತ್ರಸ್ತೆ ತಂದೆ ಕೊನೆಗೂ ಸಿಎಂ ಮಮತಾ ಬ್ಯಾನರ್ಜಿ ಅವರ ಕ್ಷಮೆ ಕೋರಿದ್ದಾರೆ.
ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ನಡೆದಿದ್ದ ಒಡಿಶಾ ಮೂಲದ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ಥೆಯ ತಂದೆ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಕಟುಟೀಕೆಗಳನ್ನು ಮಾಡಿದ್ದರು.
ಪ್ರಮುಖವಾಗಿ "ಮಹಿಳೆಯರು ರಾತ್ರಿಯಲ್ಲಿ ಹೊರಗೆ ಹೋಗಬಾರದು" ಎಂಬ ಬ್ಯಾನರ್ಜಿಯವರ ಹೇಳಿಕೆಯನ್ನು ಎಂಬಿಬಿಎಸ್ ವಿದ್ಯಾರ್ಥಿನಿಯ ತಂದೆ ಸೋಮವಾರ ಟೀಕಿಸಿದ್ದರು. ಪಶ್ಚಿಮ ಬಂಗಾಳದಲ್ಲಿ ಅವರು ಇನ್ನು ಮುಂದೆ ಸುರಕ್ಷಿತವಾಗಿಲ್ಲ. ಬಂಗಾಳವು ಔರಂಗಜೇಬನ ಆಳ್ವಿಕೆಯಲ್ಲಿದೆ ಎಂದು ತೋರುತ್ತದೆ. ನಾನು ನನ್ನ ಮಗಳನ್ನು ಒಡಿಶಾಗೆ ಕರೆದುಕೊಂಡು ಹೋಗುತ್ತೇನೆ. ಮೊದಲು ಜೀವನ. ಬಳಿಕವೇ ವೃತ್ತಿ ಜೀವನ ಬರುತ್ತದೆ' ಎಂದು ಟೀಕಿಸಿದ್ದರು.
ಅವರ ಈ ಹೇಳಿಕೆ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಅಲ್ಲದೆ ಮಮತಾ ಬ್ಯಾನರ್ಜಿ ಮತ್ತು ಅವರ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿತ್ತು. ಇದಾದ ಎರಡೇ ದಿನಗಳಲ್ಲಿ ಸಂತ್ರಸ್ಥೆಯ ತಂದೆ ಸಿಎಂ ಮಮತಾ ಬ್ಯಾನರ್ಜಿ ಅವರ ಕ್ಷಮೆ ಕೋರಿದ್ದಾರೆ.
ಮಮತಾ ಬ್ಯಾನರ್ಜಿ ನನ್ನ ತಾಯಿಯಂತೆ, ನನ್ನ ಮಗಳಿಗೆ ನ್ಯಾಯಕೊಡಿಸಿ
ಬುಧವಾರ, ಸಂತ್ರಸ್ಥೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಆಕೆ ಆರೋಗ್ಯವಾಗಿರುವುದಾಗಿ ಘೋಷಿಸಿದ ನಂತರ ಆಕೆಯನ್ನು ಮನೆಗೆ ಕರೆದುಕೊಂಡು ಹೋಗುವುದಾಗಿ ತಂದೆ ಹೇಳಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಮತಾ ಬ್ಯಾನರ್ಜಿ ನನಗೆ ತಾಯಿಯಂತಹ ವ್ಯಕ್ತಿ. ನಾನು ಏನಾದರೂ ತಪ್ಪು ಹೇಳಿದ್ದರೆ, ನನ್ನನ್ನು ಕ್ಷಮಿಸುವಂತೆ ನಾನು ಕೇಳುತ್ತೇನೆ. ನಾನು ಅವರ ಪಾದಗಳಿಗೆ ಲೆಕ್ಕವಿಲ್ಲದಷ್ಟು ನಮನ ಸಲ್ಲಿಸುತ್ತೇನೆ. ಆದರೆ ನನ್ನ ಮಗಳಿಗೆ ನ್ಯಾಯ ಸಿಗುವಂತೆ ಮಾಡಲು ನಾನು ಅವರನ್ನು ಕೇಳುತ್ತೇನೆ. ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ನಾನು ಒತ್ತಾಯಿಸುತ್ತಿದ್ದೇನೆ. ಅದು ಒಳ್ಳೆಯದು ಎಂದು ನಾನು ಭಾವಿಸುತ್ತೇನೆ. ಆದರೆ ಅದು ರಾಜ್ಯ ಆಡಳಿತದ ಮೇಲೂ ಅವಲಂಬಿತವಾಗಿದೆ" ಎಂದು ಹೇಳಿದರು.
ಅಕ್ಟೋಬರ್ 10 ರ ಸಂಜೆ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಆಹಾರ ತರಲು ಪುರುಷ ಸ್ನೇಹಿತನೊಂದಿಗೆ ಖಾಸಗಿ ವೈದ್ಯಕೀಯ ಕಾಲೇಜು ಕ್ಯಾಂಪಸ್‌ನಿಂದ ಹೊರಗೆ ಹೋದಾಗ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು ಎಂದು ಆರೋಪಿಸಲಾಗಿದೆ.