ಭೋಪಾಲ್: ಬರೊಬ್ಬರಿ 24 ಮಕ್ಕಳ ಸಾವಿಗೆ ಕಾರಣವಾದ ಕೆಮ್ಮಿನ ಸಿರಪ್ ವಿವಾದವೇ ಇನ್ನೂ ತಣ್ಣಗಾಗಿಲ್ಲ.. ಅದಾಗಲೇ ಮಧ್ಯ ಪ್ರದೇಶದಲ್ಲಿ ಮತ್ತೊಂದು ಔಷಧಿ ಭೀತಿ ಮೂಡಿಸಿದೆ.
ಹೌದು.. ಕೆಮ್ಮಿನ ಸಿರಪ್ ನ ಮಕ್ಕಳ ಸರಣಿ ಸಾವಿನ ಭಯಾನಕತೆಯ ನಂತರ, ಈಗ ಮಧ್ಯಪ್ರದೇಶದಲ್ಲಿ ಪ್ರತಿಜೀವಕ ಅಂದರೆ ಆ್ಯಂಟಿಬಯಾಟಿಕ್ ಗಳ ಭೀತಿ ಆರಂಭವಾಗಿದೆ.
ವಿಷಕಾರಿ ಕೆಮ್ಮಿನ ಸಿರಪ್‌ನಿಂದಾಗಿ ಮಕ್ಕಳ ಸಾವು ಸಂಭವಿಸುತ್ತಿರುವ ನಡುವೆಯೇ ಇದೇ ಮಧ್ಯ ಪ್ರದೇಶದ, ಗ್ವಾಲಿಯರ್‌ನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಮಗುವಿಗೆ ನೀಡಲಾದ ಪ್ರತಿಜೀವಕ ಔಷಧದ ಬಾಟಲಿಯಲ್ಲಿ ಹುಳುಗಳು ಕಂಡುಬಂದಿವೆ ಎಂಬ ದೂರು ಕೇಳಿಬಂದಿದೆ.
"ಮೊರಾರ್‌ನ ಸರ್ಕಾರಿ ಆಸ್ಪತ್ರೆಯ ಮಹಿಳೆಯೊಬ್ಬರು ಅಜಿಥ್ರೊಮೈಸಿನ್ ಔಷಧಿ ಬಾಟಲಿಯಲ್ಲಿ ಹುಳುಗಳ ಕಂಡುಬಂದ ಬಗ್ಗೆ ದೂರು ನೀಡಿದ್ದಾರೆ" ಎಂದು ಡ್ರಗ್ ಇನ್ಸ್‌ಪೆಕ್ಟರ್ ಅನುಭೂತಿ ಶರ್ಮಾ ಸ್ಪಷ್ಟಪಡಿಸಿದ್ದಾರೆ.
'ಮಹಿಳೆ ತಂದಿದ್ದ ಔಷಧದ ಬಾಟಲಿ ತೆರೆದಿದ್ದರೂ, ಈ ವಿಷಯವನ್ನು ತಕ್ಷಣವೇ ತನಿಖೆ ಮಾಡಲಾಯಿತು ಎಂದು ಅವರು ಹೇಳಿದರು. ಮೊರಾರ್‌ನ ಆಸ್ಪತ್ರೆಯಲ್ಲಿ ವಿತರಿಸಿ ಸಂಗ್ರಹಿಸಲಾಗಿದ್ದ ಈ ಔಷಧಿಯ ಎಲ್ಲಾ 306 ಬಾಟಲಿಗಳನ್ನು ಹಿಂಪಡೆಯಲಾಗಿದೆ ಮತ್ತು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮಗುವಿಗೆ ಔಷಧ ನೀಡಿದ ಮಹಿಳೆಯೊಬ್ಬರು ನೀಡಿದ ದೂರಿನ ನಂತರ, ಗ್ವಾಲಿಯರ್ ಜಿಲ್ಲೆಯ ಮೊರಾರ್ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿರುವ ಅಜಿಥ್ರೊಮೈಸಿನ್ ಪ್ರತಿಜೀವಕದ ಸಂಪೂರ್ಣ ಸ್ಟಾಕ್ ಅನ್ನು ಸೀಲ್ ಮಾಡಲಾಗಿದೆ ಮತ್ತು ಮಾದರಿಗಳನ್ನು ಪರೀಕ್ಷೆಗಾಗಿ ಭೋಪಾಲ್‌ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಜಿಥ್ರೊಮೈಸಿನ್ ಪ್ರತಿಜೀವಕವನ್ನು (ಆ್ಯಂಟಿಬಯಾಟಿಕ್) ಸಾಮಾನ್ಯವಾಗಿ ವಿವಿಧ ಸೋಂಕುಗಳಿಗೆ ಮಕ್ಕಳಿಗೆ ನೀಡಲಾಗುತ್ತದೆ. ಅಧಿಕಾರಿಗಳ ಪ್ರಕಾರ, ಈ ಔಷಧವು ಜೆನೆರಿಕ್ ಆಗಿದ್ದು, ಮಧ್ಯಪ್ರದೇಶ ಮೂಲದ ಕಂಪನಿಯಿಂದ ತಯಾರಿಸಲ್ಪಟ್ಟಿದೆ.
ಕೆಲವು ಔಷಧಿ ಬಾಟಲಿಗಳ ಪ್ರಾಥಮಿಕ ತಪಾಸಣೆಯಲ್ಲಿ ಕೀಟಗಳ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ, ಆದರೆ ಪರೀಕ್ಷೆ ಅಗತ್ಯ ಎಂದು ಅವರು ಹೇಳಿದರು. ಕೆಲವು ಬಾಟಲಿಗಳನ್ನು ಪರೀಕ್ಷೆಗಾಗಿ ಭೋಪಾಲ್‌ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಔಷಧಿಯ ಮಾದರಿಯನ್ನು ಕೋಲ್ಕತ್ತಾದ ಕೇಂದ್ರ ಔಷಧ ಪ್ರಯೋಗಾಲಯಕ್ಕೂ ಕಳುಹಿಸಲಾಗುವುದು ಎಂದು ಶರ್ಮಾ ಹೇಳಿದರು.
24 ಮಕ್ಕಳ ಸಾವಿಗೆ ಕಾರಣವಾಗಿದ್ದ ಕೆಮ್ಮಿನ ಸಿರಪ್
ಈ ಹಿಂದೆ ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯ 24 ಮಕ್ಕಳು ಕಲಬೆರಕೆ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಸೇವನೆಯಿಂದ ಉಂಟಾದ ಶಂಕಿತ ಮೂತ್ರಪಿಂಡ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ಈ ದುರಂತವು ಭಾರತದಲ್ಲಿ ಗುರುತಿಸಲಾದ ಮೂರು "ಗುಣಮಟ್ಟದ" ಮೌಖಿಕ ಕೆಮ್ಮಿನ ಸಿರಪ್‌ಗಳಾದ ಕೋಲ್ಡ್ರಿಫ್, ರೆಸ್ಪಿಫ್ರೆಶ್ ಟಿಆರ್ ಮತ್ತು ರೀಲೈಫ್ ವಿರುದ್ಧ ಎಚ್ಚರಿಕೆ ನೀಡಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅನ್ನು ಪ್ರೇರೇಪಿಸಿತು. ಮಾತ್ರವಲ್ಲದೇ ಈಗಾಗಲೇ ಈ ಮೂರು ಸಿರಪ್ ಗಳನ್ನು ಹಲವು ರಾಜ್ಯಗಳು ನಿಷೇಧಿಸಿವೆ.