ಜಗದಲ್ಪುರ: ಛತ್ತೀಸ್‌ಗಢದಲ್ಲಿ ಒಂದೇ ದಿನ ನಡೆದ ಅತಿ ದೊಡ್ಡ ಶರಣಾಗತಿಯಲ್ಲಿ, 110 ಮಹಿಳಾ ನಕ್ಸಲರು ಸೇರಿದಂತೆ 208 ಮಾವೋವಾದಿಗಳು ಶುಕ್ರವಾರ ಶಸ್ತ್ರಾಸ್ತ್ರ ತ್ಯಜಿಸಿ ಪೊಲೀಸರಿಗೆ ಶರಣಾಗಿದ್ದಾರೆ.
ರಾಯ್‌ಪುರದಿಂದ ದಕ್ಷಿಣಕ್ಕೆ 300 ಕಿ.ಮೀ ದೂರದಲ್ಲಿರುವ ಜಗದಲ್ಪುರ(ಬಸ್ತರ್ ಜಿಲ್ಲೆ)ದಲ್ಲಿರುವ ರಿಸರ್ವ್ ಪೊಲೀಸ್ ಲೈನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ 208 ನಕ್ಸಲರು ಶಸ್ತ್ರಾಸ್ತ್ರ ತ್ಯಜಿಸಿದರು.
ಈ ಬೆಳವಣಿಗೆಯು ಛತ್ತೀಸ್‌ಗಢದಲ್ಲಿ ನಿಷೇಧಿತ ಸಂಘಟನೆ ಸಿಪಿಐ(ಮಾವೋವಾದಿ) ಚಳುವಳಿಗೆ ದೊಡ್ಡ ಹಿನ್ನಡೆಯನ್ನುಂಟುಮಾಡಿದೆ.
ಹಿರಿಯ ನಕ್ಸಲ್ ನಾಯಕ ರೂಪೇಶ್ ನೇತೃತ್ವದಲ್ಲಿ ಶರಣಾದ, ಕೆಂಪು ಬಂಡುಕೋರರು ಎಕೆ -47 ರೈಫಲ್‌ಗಳು, ಐಎನ್‌ಎಸ್‌ಎಎಸ್ ಅಸಾಲ್ಟ್ ರೈಫಲ್‌ಗಳು, ಸೆಲ್ಫ್-ಲೋಡಿಂಗ್ ರೈಫಲ್(ಎಸ್‌ಎಲ್‌ಆರ್), ಬ್ಯಾರೆಲ್ ಗ್ರೆನೇಡ್ ಲಾಂಚರ್(ಬಿಜಿಎಲ್) ಸೇರಿದಂತೆ 153 ಶಸ್ತ್ರಾಸ್ತ್ರಗಳನ್ನು ಸಹ ಪೊಲೀಸರಿಗೆ ಒಪ್ಪಿಸಿದರು.
ಬಸ್‌ಗಳಲ್ಲಿ ಆಗಮಿಸಿದ ಮಾವೋವಾದಿಗಳಿಗೆ ಸಾಂಕೇತಿಕವಾಗಿ ರೆಡ್ ಕಾರ್ಪೆಟ್ ಸ್ವಾಗತ ನೀಡಲಾಯಿತು. 'ಪುನಾ ಮಾರ್ಗಮ್' ಎಂಬ ಹೆಸರಿನ ಸಮಾರಂಭದಲ್ಲಿ ಪ್ರತಿಯೊಬ್ಬರಿಗೂ ಭಾರತೀಯ ಸಂವಿಧಾನದ ಪ್ರತಿ ಮತ್ತು ವೇದಿಕೆಯ ಮೇಲೆ ಗುಲಾಬಿಯನ್ನು ನೀಡಲಾಯಿತು. ಇದು ಮಾವೋವಾದಿ ಕಾರ್ಯಕರ್ತರು ಮತ್ತೆ ಮುಖ್ಯವಾಹಿನಿಗೆ ಸೇರುವುದನ್ನು ಸೂಚಿಸುತ್ತದೆ.
ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರ ಸಮ್ಮುಖದಲ್ಲಿ ಮಾವೋವಾದಿಗಳ ಸಾಮೂಹಿಕ ಶರಣಾಗತಿಯ ಹಿಂದಿನ ಅಧಿಕೃತ ವೇಳಾಪಟ್ಟಿಯನ್ನು ರದ್ದುಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದಾಗ್ಯೂ, ಮುಖ್ಯಮಂತ್ರಿಗಳು ನಂತರ ಜಗದಲ್‌ಪುರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.