ಪಾಟ್ನಾ: ವಂಚನೆ ಪ್ರಕರಣವೊಂದರಲ್ಲಿ ಸಿಬಿಐ ನ್ಯಾಯಾಲಯದಲ್ಲಿ ದೋಷಿ ಎಂದು ಸಾಬೀತಾಗಿ ಕಳೆದ ವರ್ಷ ಶಾಸಕ ಸ್ಥಾನ ಕಳೆದುಕೊಂಡಿದ್ದ ಆರ್ ಜೆಡಿಯ ಮಾಜಿ ನಾಯಕ ಅನಿಲ್ ಸಹಾನಿ ಬಿಜೆಪಿ ಸೇರಿದ್ದಾರೆ.
ಬಿಹಾರದ ಬಿಜೆಪಿ ಚುನಾವಣಾ ಉಸ್ತುವಾರಿಯೂ ಆಗಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಸಮ್ಮುಖದಲ್ಲಿ ಸಹಾನಿ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಈ ವೇಳೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಸೇರಿದಂತೆ ಅನೇಕ ಪ್ರಮುಖ ನಾಯಕರು ಉಪಸ್ಥಿತರಿದ್ದರು.
2012ರಲ್ಲಿ ರಾಜ್ಯಸಭೆಯಲ್ಲಿ ಆರ್‌ಜೆಡಿ ನಾಯಕನಾಗಿದ್ದ ಅವಧಿಯಲ್ಲಿ ಪ್ರಯಾಣ ಮಾಡದಿದ್ದರೂ, ರಜೆ ಪ್ರಯಾಣ ರಿಯಾಯಿತಿ ಪಡೆಯಲು ನಕಲಿ ವಿಮಾನ ಟಿಕೆಟ್ ಸಲ್ಲಿಸಿದ್ದಕ್ಕಾಗಿ ಸಿಬಿಐ ಕೋರ್ಟ್ ಸಹಾನಿ ಅವರನ್ನು ದೋಷಿ ಎಂದು ತೀರ್ಪು ನೀಡಿತ್ತು. ಈ ಪ್ರಕರಣದ ಹಿನ್ನೆಲೆಯಲ್ಲಿ ಅವರು ಕಳೆದ ವರ್ಷ ಶಾಸಕರಾಗಿ ಅನರ್ಹರಾಗಿದ್ದರು.
2020ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕುರ್ಹಾನಿ ಕ್ಷೇತ್ರದಿಂದ ಸಹಾನಿ ಬಿಜೆಪಿ ಅಭ್ಯರ್ಥಿ ಕೇದರ್ ಗುಪ್ತಾ ವಿರುದ್ಧ ಕೇವಲ 900 ಮತಗಳ ಅಂತರದಿಂದ ಗೆದ್ದಿದ್ದರು. ಆದರೆ ಅನರ್ಹತೆ ಬಳಿಕ ನಡೆದ ಉಪಚುನಾವಣೆಯಲ್ಲಿ ಗುಪ್ತಾ ಗೆಲುವು ಸಾಧಿಸಿ ನಂತರ ರಾಜ್ಯ ಸಚಿವರಾಗಿದ್ದರು. ಮುಜಾಫರ್‌ಪುರ ಜಿಲ್ಲೆಯ ಪ್ರಮುಖ ಹಿಂದುಳಿದ ವರ್ಗವಾದ ‘ನಿಶಾದ್’ ಸಮುದಾಯದ ಮತದಾರರನ್ನು ಸೆಳೆಯುವ ಉದ್ದೇಶದಿಂದ ಸಹಾನಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ ಎನ್ನಲಾಗಿದೆ.
ಮುಂಬರುವ ಚುನಾವಣೆಗಳಿಗೆ ಆರ್‌ಜೆಡಿಯ 40 ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸಹಾನಿ ಅವರ ಹೆಸರಿತ್ತು. ಕುರ್ಹಾನಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾಗಿರುವ ಸಹಾನಿ, ತಮ್ಮ ಮಗನಿಗೆ ಕ್ಷೇತ್ರದಿಂದ ಟಿಕೆಟ್ ಬೇಡಿಕೆ ಇಟ್ಟಿದ್ದರು, ಆರ್ ಜೆಡಿ ಪಕ್ಷ ಟಿಕೆಟ್ ನೀಡಲು ನಿರಾಕರಿಸಿದ ನಂತರ ಪಕ್ಷದ ನಾಯಕರ ಬಗ್ಗೆ ಅಸಮಾಧಾನಗೊಂಡಿದ್ದರು ಎಂದು ವರದಿಯಾಗಿದೆ. ಮುಜಾಫರ್‌ಪುರ ಜಿಲ್ಲೆಯ ಕುರ್ಹಾನಿಯಿಂದ ಆರ್‌ಜೆಡಿ ತನ್ನ ಅಭ್ಯರ್ಥಿಯಾಗಿ ಬಬ್ಲೂ ಕುಶ್ವಾಹ ಅವರನ್ನು ಕಣಕ್ಕಿಳಿಸಿದೆ.
ಬಿಜೆಪಿ ಸೇರಿದ ನಂತರ ಮಾತನಾಡಿದ ಸಹಾನಿ ಆರ್‌ಜೆಡಿ ಅತ್ಯಂತ ಹಿಂದುಳಿದ ವರ್ಗಗಳಿಗೆ (ಇಬಿಸಿ) ಸೇರಿದ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದು ಸಾಹ್ನಿ ಆರೋಪಿಸಿದರು. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ಹೊಸಬರಿಗೆ ಚುನಾವಣೆಗೆ ಟಿಕೆಟ್ ನೀಡಲಾಗುತ್ತಿದೆ, ಇದು ತಳಮಟ್ಟದ ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಅವರು ಆರೋಪಿಸಿದರು.