ಪುರಿ: ದೇಶದಲ್ಲಿ ರೀಲ್ಸ್ ಹುಚ್ಚಾಟಕ್ಕೆ ಮತ್ತೊಂದು ಸಾವು ಸಂಭವಿಸಿದ್ದು, ಹಳಿ ಮೇಲೆ ನಿಂತು ಯುವಕನೋರ್ವ ವಿಡಿಯೋ ಮಾಡುತ್ತಿದ್ದಾಗ ರೈಲು ಗುದ್ದಿಕೊಂಡು ಹೋಗಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಒಡಿಶಾದ ಪುರಿಯಲ್ಲಿ ರೈಲ್ವೆ ಹಳಿಯಲ್ಲಿ ರೀಲ್ಸ್ ಚಿತ್ರೀಕರಿಸುತ್ತಿದ್ದ 15 ವರ್ಷದ ಬಾಲಕ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ. ಮಂಗಳವಾರ ಜನಕ್ ದೇವ್‌ಪುರ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ಮೂಲಗಳ ಪ್ರಕಾರ ಮಂಗಳಘಾಟ್‌ನ ನಿವಾಸಿ ವಿಶ್ವಜೀತ್ ಸಾಹು ತನ್ನ ತಾಯಿಯೊಂದಿಗೆ ದಕ್ಷಿಣಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಮನೆಗೆ ಹಿಂದಿರುಗುವಾಗ, ಸಾಮಾಜಿಕ ಮಾಧ್ಯಮಕ್ಕಾಗಿ ಸಣ್ಣ ವೀಡಿಯೊವನ್ನು ರೆಕಾರ್ಡ್ ಮಾಡಲು ವಿಶ್ವಜೀತ್ ಸಾಹು ರೈಲ್ವೆ ಹಳಿಗಳ ಬಳಿ ನಿಂತಿದ್ದ. ಈ ವೇಳೆ ರೈಲು ಬರುತ್ತಿರುವುದನ್ನು ಗಮನಿಸಿದ ವಿಶ್ವಜೀತ್ ಹಳಿಯ ತುದಿಯಲ್ಲಿ ನಿಂತು ರೈಲು ಹೋಗುವುದನ್ನು ಚಿತ್ರೀಕರಿಸಲು ಮುಂದಾದ.
ಈ ವೇಳೆ ರೈಲು ಆತನಿಗೆ ಢಿಕ್ಕಿಯಾಗಿ ಆತ ಕೂಡಲೇ ಕುಸಿದಿದ್ದಾನೆ. ಈ ವೇಳೆ ರೈಲು ಹಾದುಹೋಗುವ ಶಬ್ಧ ಕೂಡ ಮೊಬೈಲ್ ನಲ್ಲಿ ದಾಖಲಾಗಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಒಡಿಶಾ ರೈಲ್ವೆ ಪೊಲೀಸರು (ಜಿಆರ್‌ಪಿ) ಶವವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಇದೇ ಮೊದಲೇನಲ್ಲ
ಅಂತೆಯೇ ಒಡಿಶಾದಲ್ಲಿ ರೀಲ್ಸ್ ಹುಚ್ಚಾಟಕ್ಕೆ ಯುವಕರು ಬಲಿಯಾಗುತ್ತಿರುವುದು ಇದೇ ಮೊದಲೇನಲ್ಲ.. ಈ ಹಿಂದೆ ಅಂದರೆ ಆಗಸ್ಟ್‌ನಲ್ಲಿ, ಗಂಜಾಂ ಜಿಲ್ಲೆಯ ಬೆರ್ಹಾಂಪುರದಿಂದ ಬಂದ 22 ವರ್ಷದ ಯೂಟ್ಯೂಬರ್, ಒಡಿಶಾದ ಕೊರಾಪುಟ್‌ನಲ್ಲಿರುವ ದುಡುಮಾ ಜಲಪಾತದಲ್ಲಿ ರೀಲ್ ಚಿತ್ರೀಕರಿಸುವಾಗ ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದರು.
ಸಾಗರ್ ತುಡು ಎಂಬಾತ ತನ್ನ ಸ್ನೇಹಿತ ಅಭಿಜಿತ್ ಬೆಹೆರಾ ಅವರೊಂದಿಗೆ ಡ್ರೋನ್ ಕ್ಯಾಮೆರಾ ಬಳಸಿ ತಮ್ಮ ಯೂಟ್ಯೂಬ್ ಚಾನೆಲ್‌ಗಾಗಿ ಸ್ಥಳೀಯ ಪ್ರವಾಸಿ ತಾಣಗಳ ವೀಡಿಯೊಗಳನ್ನು ರೆಕಾರ್ಡ್ ಮಾಡಲು ಆ ಪ್ರದೇಶಕ್ಕೆ ಭೇಟಿ ನೀಡಿದ್ದ.
ಲಮ್ತಾಪುಟ್ ಪ್ರದೇಶದಲ್ಲಿ ಭಾರೀ ಮಳೆಯಾದ ನಂತರ ಮಚಕುಂಡ ಅಣೆಕಟ್ಟಿನ ಅಧಿಕಾರಿಗಳು ನೀರನ್ನು ಬಿಡುಗಡೆ ಮಾಡಿದಾಗ ಈ ಅಪಘಾತ ಸಂಭವಿಸಿತ್ತು. ಇದರಿಂದಾಗಿ ಜಲಪಾತದಲ್ಲಿ ನೀರು ಉಕ್ಕಿ ಹರಿಯಿತು. ಈ ವೇಳೆ ಬಂಡೆಯ ಮೇಲೆ ನಿಂತಿದ್ದ ಸಾಗರ್ ಸಮತೋಲನ ಕಳೆದುಕೊಂಡು ನೀರಿನ ಹರಿವಿನಲ್ಲಿ ಕೊಚ್ಚಿ ಹೋದ.
ಪ್ರವಾಸಿಗರು ಮತ್ತು ಸ್ಥಳೀಯರು ಅವರನ್ನು ರಕ್ಷಿಸಲು ಮಾಡಿದ ಪ್ರಯತ್ನಗಳು ವಿಫಲವಾದವು. ಮಚಕುಂಡ ಪೊಲೀಸರು ಮತ್ತು ಅಗ್ನಿಶಾಮಕ ದಳದ ತಂಡಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರೂ ಅವರನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ.