ಫರಿದಾಬಾದ್: ಕೃತಕ ಬುದ್ದಿಮತ್ತೆ ಉಪಯೋಗಿಸಿ ತಯಾರಿಸಿದ ತನ್ನ ಮೂವರು ಸಹೋದರಿಯರ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ತೋರಿಸಿ ಬ್ಲಾಕ್ ಮೇಲ್ ಮಾಡಿದ್ದಕ್ಕೇ 19 ವರ್ಷದ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ವಿದ್ರಾವಕ ಘಟನೆ ವರದಿಯಾಗಿದೆ.
ಹರ್ಯಾಣದ ಫರಿದಾಬಾದ್ ನಲ್ಲಿ ಈ ಘಟನೆ ನಡೆದಿದ್ದು, ತನ್ನ ಮೂವರು ಸಹೋದರಿಯರ ಎಐ ಮಾರ್ಫ್ ಮಾಡಿದ ಅಶ್ಲೀಲ ಫೋಟೋಗಳನ್ನು ಬಳಸಿ ಹಣಕ್ಕಾಗಿ ಬೆದರಿಕೆ ಹಾಕಿದ್ದರಿಂದ 19 ವರ್ಷದ ಕಾಲೇಜು ವಿದ್ಯಾರ್ಥಿ ರಾಹುಲ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೂಲಗಳ ಪ್ರಕಾರ ಆರೋಪಿಗಳಿಬ್ಬರು ರಾಹುಲ್ ನ ಮೂವರು ಸಹೋದರಿಯರ ಎಐ ಅಶ್ಲೀಲ ಫೋಟೋ ಮತ್ತು ವಿಡಿಯೋ ತಯಾರಿಸಿ 20,000 ರೂ. ಬೇಡಿಕೆ ಇಟ್ಟಿದ್ದರು.
ಅಲ್ಲದೆ ಹಣ ನೀಡದಿದ್ದರೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು. ಫೋನ್ ಅನ್ನು ಹ್ಯಾಕ್ ಮಾಡಿ ನಿರಂತರವಾಗಿ ಮೆಸೇಜ್‌ಗಳನ್ನು ಕಳುಹಿಸುತ್ತಿದ್ದ ಆರೋಪಿಗಳು, ವಿದ್ಯಾರ್ಥಿ ರಾಹುಲ್‌ಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರು ಎನ್ನಲಾಗಿದೆ.
ವಿಷ ಸೇವಿಸಿದ್ದ ರಾಹುಲ್
ಪೋಷಕರು ಹೇಳಿರುವಂತೆ ರಾಹುಲ್ ಡಿಎವಿ ಕಾಲೇಜಿನ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ. ಶನಿವಾರ ಸಂಜೆ ಸುಮಾರು 7 ಗಂಟೆಗೆ, ರಾಹುಲ್ ತನ್ನ ಕೋಣೆಯಲ್ಲಿ ಸಲ್ಫಾಸ್ (ಕೀಟನಾಶಕ ಮಾತ್ರೆಗಳು) ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಕುಟುಂಬದವರು ತಕ್ಷಣವೇ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು, ಆದರೆ ಚಿಕಿತ್ಸೆಯ ಸಮಯದಲ್ಲಿ ಆತ ಸಾವನ್ನಪ್ಪಿದ್ದಾರೆ.
ಮೂಲತಃ ಬಿಹಾರದ ಸಿವಾನ್ ಜಿಲ್ಲೆಯವರಾದ ಈ ಕುಟುಂಬವು ಸುಮಾರು ಐದು ದಶಕಗಳಿಂದ ಫರಿದಾಬಾದ್‌ನಲ್ಲಿ ವಾಸಿಸುತ್ತಿದೆ. ರಾಹುಲ್ ತಂದೆ ಮನೋಜ್ ಅವರು ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು, ರಾಹುಲ್ ಅವರ ಕಿರಿಯ ಮಗ. ಅವರಿಗೆ ಇಬ್ಬರು ವಿವಾಹಿತ ಮತ್ತು ಒಬ್ಬ ಅವಿವಾಹಿತ ಮಗಳು ಇದ್ದಾರೆ.
ವಾಟ್ಸಪ್ ನಲ್ಲಿ ಬೆದರಿಕೆ
ಕಳೆದ 2 ವಾರಗಳಿಂದ ರಾಹುಲ್ ನ ವರ್ತನೆಯಲ್ಲಿ ಬದಲಾಗಿತ್ತು ಎಂದು ರಾಹುಲ್ ತಂದೆ ಮನೋಜ್ ಭಾರ್ತಿ ಪೊಲೀಸರಿಗೆ ತಿಳಿಸಿದ್ದಾರೆ. ಆರೋಪಿಗಳು ತನ್ನ ಮಗನ ಫೋನ್ ಹ್ಯಾಕ್ ಮಾಡಿ ಹೆಣ್ಣು ಮಕ್ಕಳ ಫೋಟೋಗಳನ್ನು ಕದ್ದು ಅವುಗಳನ್ನು ಕೃತಕ ಬುದ್ದಿಮತ್ತೆ ಬಳಸಿ ಅಶ್ಲೀಲ ಫೋಟೋ ಮತ್ತು ವಿಡಿಯೋ ತಯಾರಿಸಿದ್ದಾರೆ.
ಬಳಕೆ ಅವುಗಳನ್ನು ರಾಹುಲ್ ಗೆ ವಾಟ್ಸಪ್ ಮಾಡಿ 20 ಸಾವಿರ ಹಣ ನೀಡದಿದ್ದರೆ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಕುರಿತು ಪದೇ ಪದೇ ಬೆದರಿಕೆ ಕರೆಗಳನ್ನು ಮಾಡಿದ್ದಾರೆ. ಇದರಿಂದ ತುಂಬಾ ಕುಗ್ಗಿ ಹೋಗಿದ್ದ ರಾಹುಲ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆತ್ಮಹತ್ಯೆಗೆ ಪ್ರಚೋದಿಸಿದ್ದ ಸಾಹಿಲ್
ಇಷ್ಟು ಮಾತ್ರವಲ್ಲದೇ ಆರೋಪಿ ಸಾಹಿಲ್ ರಾಹುಲ್ ಗೆ ಕರೆ ಮಾಡಿದ್ದ ಸಂದರ್ಭದಲ್ಲಿ ಹೇಗೆ ಸಾಯುತ್ತಿಯಾ ಎಂದೆಲ್ಲಾ ಉದ್ರೇಕಿಸಿ ಮಾತನಾಡಿದ್ದಾನೆ. ರಾಹುಲ್ ಫೋನ್ ಪರಿಶೀಲಿಸಿದಾಗ ಚಾಟ್ ಗಳಲ್ಲಿ ಸಾಹಿಲ್ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಿದ್ದಾನೆ. ಆತ್ಮಹತ್ಯೆಗೆ ಕೆಲ ವಸ್ತುಗಳನ್ನು ಕೂಡ ಸೂಚಿಸಿದ್ದಾನೆ ಎಂದು ರಾಹುಲ್ ತಂದೆ ಮನೋಜ್ ಆರೋಪಿಸಿದ್ದಾರೆ.
ಈ ಪ್ರಕರಣದಲ್ಲಿ ರಾಹುಲ್ ಸ್ನೇಹಿತ ನೀರಜ್ ಕೂಡ ಭಾಗಿಯಾಗಿದ್ದು, ಆತ್ಮಹತ್ಯೆಗೂ ಮುನ್ನ ರಾಹುಲ್ ಕೊನೆಯ ಬಾರಿಗೆ ನೀರಜ್ ಗೆ ಕರೆ ಮಾಡಿದ್ದ ಎಂದು ರಾಹುಲ್ ತಂದೆ ಆರೋಪಿಸಿದ್ದಾರೆ.
ರಾಹುಲ್ ಸ್ನೇಹಿತರ ವಿರುದ್ಧ ಪ್ರಕರಣ
ಇನ್ನು ರಾಹುಲ್ ಕುಟುಂಬಸ್ಥರು ನೀಡಿರುವ ದೂರಿನ ಮೇರೆಗೆ ಪೊಲೀಸರು ರಾಹುಲ್ ಸ್ನೇಹಿತರೂ ಆಗಿರುವ ಸಾಹಿಲ್ ಮತ್ತು ನೀರಜ್ ಭಾರ್ತಿ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.