ನವದೆಹಲಿ: ಅಕ್ಟೋಬರ್ 6 ರಂದು ಭಾರತದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಮೇಲೆ ಶೂ ಎಸೆಯಲು ಪ್ರಯತ್ನಿಸಿದ ವಕೀಲರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮವನ್ನು ಸುಪ್ರೀಂಕೋರ್ಟ್ ಕೈಬಿಟ್ಟಿದೆ. ಈ ಬಗ್ಗೆ ಒಲವು ಹೊಂದಿಲ್ಲ ಎಂದು ಭಾರತದ ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ಸ್ವತಃ ಸಿಜೆಐ ಅವರೇ ವಕೀಲರ ವಿರುದ್ಧ ಪ್ರಕ್ರಿಯೆ ಮುಂದುವರಿಯಲು ನಿರಾಕರಿಸಿದ್ದಾರೆ.
ಸಿಜೆಐ ಮೇಲೆ ಶೂ ಎಸೆದ ವಕೀಲರಿಗೆ ನ್ಯಾಯಾಂಗ ನಿಂದನೆ ನೋಟಿಸ್ ನೀಡುವುದರಿಂದ ಅನಗತ್ಯವಾಗಿ ಪ್ರಾಮುಖ್ಯತೆ ನೀಡಿದಂತಾಗಲಿದೆ ಎಂದು ನ್ಯಾಯಾಲಯವು ಅರ್ಜಿದಾರರಾದ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (SCBA) ಗೆ ತಿಳಿಸಿದೆ.
ಅಕ್ಟೋಬರ್ 6 ರಂದು ವಿಷ್ಣು ವಿಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ವಿಚಾರಣೆ ವೇಳೆಯಲ್ಲಿ ಸಿಜೆಐ ಗವಾಯಿ ಅವರ ಮೇಲೆ ಶೂ ಎಸೆಯಲು ವಕೀಲ ರಾಕೇಶ್ ಕಿಶೋರ್ ಯತ್ನಿಸಿದ್ದರು.
ಅವರ ವಿರುದ್ಧದ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಎಸ್‌ಸಿಬಿಎ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜಾಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠ ವಿಚಾರಣೆ ನಡೆಸುತ್ತಿದೆ.
ನ್ಯಾಯಾಲಯದಲ್ಲಿ ಘೋಷಣೆ ಕೂಗುವುದು ಮತ್ತು ಶೂ ಎಸೆಯುವುದು ನ್ಯಾಯಾಂಗ ನಿಂದನೆಯ ಸ್ಪಷ್ಟ ಪ್ರಕರಣಗಳಾಗಿವೆ. ಆದರೆ ಇದು ಸಂಬಂಧಪಟ್ಟ ನ್ಯಾಯಾಧೀಶರ ಮೇಲೆ ಅವಲಂಬಿತವಾಗಿದೆ. ಅಂತಹ ಘಟನೆಗಳನ್ನು ತಡೆಯಲು ಮಾರ್ಗಸೂಚಿಗಳನ್ನು ಹಾಕುವುದನ್ನು ಪರಿಗಣಿಸುವುದಾಗಿ ನ್ಯಾಯಾಲಯ ಹೇಳಿದೆ.