ಪಾಟ್ನಾ: ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರು ಎರಡು ರಾಜ್ಯಗಳ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ಹಲವು ಮಾಧ್ಯಮ ವರದಿಗಳು ವರದಿ ಮಾಡಿದ ನಂತರ ಬಿಹಾರದ ರೋಹ್ತಾಸ್‌ನಲ್ಲಿರುವ ಜಿಲ್ಲಾ ಚುನಾವಣಾ ಕಚೇರಿ ಮಂಗಳವಾರ ಅವರಿಗೆ ನೋಟಿಸ್ ನೀಡಿದೆ.
ಪ್ರಶಾಂತ್ ಕಿಶೋರ್ ಅವರು ಬಿಹಾರ ಮತ್ತು ಪಕ್ಕದ ಪಶ್ಚಿಮ ಬಂಗಾಳದಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಟಿಎನ್‌ಐಇ ಇಂದು ಮೊದಲು ವರದಿ ಮಾಡಿತ್ತು. ವರದಿ ಬೆನ್ನಲ್ಲೇ ಎಚ್ಚೆತ್ತ ಚುನಾವಣಾ ಆಯೋಗ, ಪ್ರಶಾಂತ್ ಕಿಶೋರ್ ನೋಟಿಸ್ ನೀಡಿದ್ದು, ಮೂರು ದಿನಗಳಲ್ಲಿ ಪ್ರತಿಕ್ರಿಯಿಸುವಂತೆ ಸೂಚಿಸಲಾಗಿದೆ.
ಪ್ರಶಾಂತ್ ಕಿಶೋರ್ ಅವರು ರೋಹ್ತಾಸ್ ಜಿಲ್ಲೆಯ ಸಸಾರಾಮ್ ಲೋಕಸಭಾ ಕ್ಷೇತ್ರದ ಕಾರ್ಗಹರ್ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ. ಅವರ ಪೂರ್ವಜರ ಗ್ರಾಮ ಕೋನಾರ್‌ನಲ್ಲಿರುವ ಸೆಂಟ್ರಲ್ ವಿದ್ಯಾಲಯ ಅವರ ಮತದಾನ ಕೇಂದ್ರವಾಗಿದೆ.
ಮತ್ತೊಂದೆಡೆ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿಧಾನಸಭಾ ಕ್ಷೇತ್ರವಾದ ಭಬಾನಿಪುರದಲ್ಲಿ 121 ಕಾಲಿಘಾಟ್ ರಸ್ತೆ ಎಂದು ಪ್ರಶಾಂತ್ ಕಿಶೋರ್ ಅವರ ವಿಳಾಸವಿದೆ. ತಮ್ಮ ಮತಕೇಂದ್ರವನ್ನು ಬಿ ರಾಣಿಶಂಕರಿ ಲೇನ್‌ನಲ್ಲಿರುವ ಸೇಂಟ್ ಹೆಲೆನ್ ಶಾಲೆ ಎಂದು ಹೆಸರಿಸಲಾಗಿದೆ.
ಕಿಶೋರ್ ಅವರು 2021 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಸಲಹೆಗಾರರಾಗಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಜೊತೆ ಕೆಲಸ ಮಾಡಿದ್ದರು.
ಚುನಾವಣಾ ಆಯೋಗ ತನ್ನ ನೋಟಿಸ್‌ನಲ್ಲಿ ಪ್ರಶಾಂತ್ ಕಿಶೋರ್ ಅವರು ಎರಡು ರಾಜ್ಯಗಳಲ್ಲಿ ಮತದಾರರಾಗಿರುವುದನ್ನು ಎತ್ತಿ ತೋರಿಸಿದ ಮಾಧ್ಯಮ ವರದಿಯನ್ನು ಉಲ್ಲೇಖಿಸಲಾಗಿದೆ.
"ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 31" ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ತನ್ನ ಹೆಸರನ್ನು ಮತದಾರರಾಗಿ ನೋಂದಾಯಿಸಿಕೊಳ್ಳುವುದನ್ನು ನಿಷೇಧಿಸುತ್ತದೆ ಮತ್ತು ಈ ನಿಬಂಧನೆಯ ಉಲ್ಲಂಘನೆಯು "ಒಂದು ವರ್ಷ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು" ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.