ಪಾಟ್ನಾ: ಬಿಹಾರ ಸರ್ಕಾರವು ಹಲವಾರು ಅಕ್ರಮಗಳಲ್ಲಿ ಭಾಗಿಯಾಗಿದದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ 'ಭ್ರಷ್ಟಾಚಾರದ ಭೀಷ್ಮ ಪಿತಾಮಹ' ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಸೋಮವಾರ ಬಣ್ಣಿಸಿದ್ದಾರೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಪರೋಕ್ಷ ದಾಳಿ ನಡೆಸಿದ ಅವರು, 'ಚುನಾವಣಾ ಆಯೋಗದ ಸಹಾಯದಿಂದ ಇಬ್ಬರು ಬಿಜೆಪಿ ನಾಯಕರು ದೇಶದಲ್ಲಿ ಪ್ರಜಾಪ್ರಭುತ್ವವನ್ನು ಕೊನೆಗೊಳಿಸಲು ಬಯಸುತ್ತಿದ್ದಾರೆ' ಎಂದು ಹೇಳಿದ್ದಾರೆ.
'ಬಿಹಾರ ಮುಖ್ಯಮಂತ್ರಿ ಪ್ರಜ್ಞಾಪೂರ್ವಕ ಮನಸ್ಥಿತಿಯಲ್ಲಿಲ್ಲ. ಅವರಿಗೆ ದೂರದೃಷ್ಟಿಯ ಕೊರತೆಯಿದೆ. ವಾಸ್ತವವಾಗಿ, ಮುಖ್ಯಮಂತ್ರಿಗೆ ರಾಜ್ಯದ ಬಗ್ಗೆ ದೂರದೃಷ್ಟಿ ಇಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನರು ಅವರ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುತ್ತಾರೆ' ಎಂದು ಬಿಹಾರದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ 'ಮತದಾರ ಅಧಿಕಾರ ಯಾತ್ರೆ'ಯ ಸಮಾರೋಪ ಸಮಾರಂಭದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ತೇಜಸ್ವಿ ಹೇಳಿದ್ದಾರೆ.
'ಬಿಹಾರ ಸಿಎಂ ಭ್ರಷ್ಟಾಚಾರದ 'ಭೀಷ್ಮ ಪಿತಾಮಹ' ಆಗಿದ್ದಾರೆ. ಬಿಹಾರದಲ್ಲಿ ಎಂಜಿನಿಯರ್‌ಗಳು 100 ಕೋಟಿ ರೂ. ನಗದು ಸಹಿತ ಸಿಕ್ಕಿಬಿದ್ದರು. ತಮ್ಮ ಆಡಳಿತದಲ್ಲಿಯೇ ಇಷ್ಟು ದೊಡ್ಡ ಪ್ರಮಾಣದ ಅಕ್ರಮಗಳು ನಡೆಯುತ್ತಿರುವಾಗ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದನ್ನು ಮುಖ್ಯಮಂತ್ರಿ ನಿಲ್ಲಿಸಬೇಕು' ಎಂದು ಅವರು ಹೇಳಿದರು.
'ನಿತೀಶ್ ಕುಮಾರ್ ಅವರು ತಮ್ಮ ಅಭಿವೃದ್ಧಿ ಯೋಜನೆಗಳನ್ನು ಹಲವಾರು ಸಂದರ್ಭಗಳಲ್ಲಿ ನಕಲು ಮಾಡಿದ್ದಾರೆ. ಈಗ, ಬಿಹಾರಕ್ಕೆ ಮೂಲ ಮುಖ್ಯಮಂತ್ರಿ ಬೇಕು, ನಕಲಿ ಮುಖ್ಯಮಂತ್ರಿ ಅಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಹಾರದ ಜನರು ಅವರಿಗೆ (ಎನ್‌ಡಿಎ ನಾಯಕರಿಗೆ) ಪಾಠ ಕಲಿಸುತ್ತಾರೆ. ಅವರು ಜನರ ಮುಂದೆ ಸಂಪೂರ್ಣ ಬೆತ್ತಲಾಗಿದ್ದಾರೆ. ಅವರು ಸುಳ್ಳುಗಳನ್ನು ಮಾತ್ರ ಮಾತನಾಡುತ್ತಾರೆ. ಪ್ರಧಾನಿ ಸುಳ್ಳಿನ ಕಾರ್ಖಾನೆಯಾಗಿದ್ದಾರೆ' ಎಂದು ದೂರಿದರು.