ಮರಾಠಾ ಮೀಸಲಾತಿ ಬೇಡಿಕೆಯನ್ನು ಈಡೇರಿಸಲು ಕಾರ್ಯಕರ್ತ ಮನೋಜ್ ಜರಂಗೇ ಪಾಟೀಲ್ ಮತ್ತು ಅವರ ಬೆಂಬಲಿಗರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಇಂದು ಮಂಗಳವಾರ ಐದನೇ ದಿನಕ್ಕೆ ಕಾಲಿಟ್ಟಿದ್ದು, ಮುಂಬೈ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಸೋಮವಾರ ಪ್ರಕರಣ ವಿಚಾರಣೆ ನಡೆಸಿದ್ದ ಮುಂಬೈ ಹೈಕೋರ್ಟ್ ಸರ್ಕಾರಕ್ಕೆ ಇಂದು ಮಧ್ಯಾಹ್ನದೊಳಗೆ ಪ್ರತಿಭಟನಾಕಾರರನ್ನು ತೆರವುಗೊಳಿಸುವಂತೆ ಸೂಚಿಸಿದ ಕೆಲವೇ ಗಂಟೆಗಳ ನಂತರ ಈ ನೋಟಿಸ್ ಬಂದಿದೆ. ಪ್ರತಿಭಟನಾಕಾರರು ಪೊಲೀಸರು ವಿಧಿಸಿರುವ ಎಲ್ಲಾ ಸತ್ಯಾಗ್ರಹ ಪೂರ್ವ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ಜರಂಗೆ ತಮ್ಮ ಸತ್ಯಾಗ್ರಹ ಮುಂದುವರಿಸಿದ್ದರಿಂದ ಪರಿಸ್ಥಿತಿ ಭೀಕರವಾಗಿದೆ ಎಂದು ವಿವರಿಸಿದ ಹೈಕೋರ್ಟ್, ವಿಶೇಷ ವಿಚಾರಣೆಯ ಸಮಯದಲ್ಲಿ, ಸತ್ಯಾಗ್ರಹ ಪೂರ್ವ ಷರತ್ತುಗಳನ್ನು ಉಲ್ಲಂಘಿಸಲಾಗಿದೆ ಎಂದು ಗಮನಿಸಿದೆ. ಪ್ರತಿಭಟನಾಕಾರರು ಪ್ರತಿಭಟನೆಗೆ ಗೊತ್ತುಪಡಿಸಿದ ಪ್ರದೇಶದ ಮಿತಿಯೊಳಗೆ ಇರುವಂತೆ ಕೇಳಿದೆ.
ಪ್ರತಿಭಟನಾಕಾರರಿಗೆ ಪ್ರತಿಭಟನೆ ಮುಂದುವರಿಸಲು ಅನುಮತಿ ಇಲ್ಲದ ಕಾರಣ, ಮಹಾರಾಷ್ಟ್ರ ಸರ್ಕಾರವು ಕಾನೂನಿನಲ್ಲಿ ನಿಗದಿಪಡಿಸಿದ ಕಾರ್ಯವಿಧಾನವನ್ನು ಅನುಸರಿಸುತ್ತದೆ ಎಂದು ನಿರೀಕ್ಷಿಸುವುದಾಗಿ ನ್ಯಾಯಮೂರ್ತಿಗಳಾದ ರವೀಂದ್ರ ಘುಗೆ ಮತ್ತು ಗೌತಮ್ ಅಂಖದ್ ಅವರ ಪೀಠವು ಹೇಳಿದೆ.
ಇನ್ನು ಮುಂದೆ ಯಾವುದೇ ಪ್ರತಿಭಟನಾಕಾರರು ನಗರವನ್ನು ಪ್ರವೇಶಿಸದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಅದು ಹೇಳಿದೆ.
ಪ್ರತಿಭಟನಾಕಾರರು ಪ್ರತಿಭಟನೆಗೆ ಗೊತ್ತುಪಡಿಸಿದ ಸ್ಥಳವಾದ ಆಜಾದ್ ಮೈದಾನಕ್ಕೆ ಸೀಮಿತಗೊಳಿಸದೆ ದಕ್ಷಿಣ ಮುಂಬೈನ ಪ್ರಮುಖ ಪ್ರದೇಶಗಳು ಮತ್ತು ರಸ್ತೆಗಳನ್ನು ನಿರ್ಬಂಧಿಸಿದ್ದಕ್ಕಾಗಿ ಹೈಕೋರ್ಟ್ ಪ್ರತಿಭಟನಾಕಾರರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಂತೆ, 43 ವರ್ಷದ ಕಾರ್ಯಕರ್ತ ಮನೋಜ್ ಜರಂ ತನ್ನ ಬೆಂಬಲಿಗರನ್ನು ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸುವಂತೆ ಮತ್ತು ಬೀದಿಗಳಲ್ಲಿ ಓಡಾಡುವ ಮೂಲಕ ಜನರಿಗೆ ತೊಂದರೆ ನೀಡದಂತೆ ಕೇಳಿಕೊಂಡರು.
ಮರಾಠರನ್ನು ಮೀಸಲಾತಿ ಸೌಲಭ್ಯಗಳಿಗಾಗಿ ಒಬಿಸಿ ವರ್ಗಕ್ಕೆ ಸೇರಿಸಬೇಕೆಂದು ಒತ್ತಾಯಿಸುತ್ತಿರುವ ಜರಂಗೆ, ನೀರು ಕುಡಿಯುವುದನ್ನು ಸಹ ನಿಲ್ಲಿಸಿದರು, ಆದರೆ ಹೈಕೋರ್ಟ್ ನಿರ್ದೇಶನಗಳ ನಂತರ ನಿನ್ನೆ ಸಂಜೆ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುವ ವೇಳೆ ಕೆಲ ಹನಿ ನೀರು ಕುಡಿದರು.
ಮರಾಠಾ ಕೋಟಾ ಪ್ರತಿಭಟನೆಯ ಕುರಿತು ಹೈಕೋರ್ಟ್ ನಿರ್ದೇಶನಗಳನ್ನು ಸರ್ಕಾರ ಜಾರಿಗೊಳಿಸುತ್ತದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದು, ಮಹಾಯುತಿ ಸರ್ಕಾರವು ಬಿಕ್ಕಟ್ಟನ್ನು ಪರಿಹರಿಸಲು ಕಾನೂನು ಆಯ್ಕೆಗಳನ್ನು ಕಂಡುಕೊಳ್ಳುವ ಬಗ್ಗೆ ಚರ್ಚಿಸುತ್ತಿದೆ ಎಂದು ಹೇಳಿದರು.
ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ಮತ್ತು ಚರ್ಚ್‌ಗೇಟ್ ರೈಲ್ವೆ ನಿಲ್ದಾಣಗಳು, ಮೆರೈನ್ ಡ್ರೈವ್ ವಾಯುವಿಹಾರ ಮತ್ತು ಹೈಕೋರ್ಟ್ ಕಟ್ಟಡದಂತಹ ಪ್ರಮುಖ ಸ್ಥಳಗಳಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದಾರೆ ಎಂದು ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.