ಗುವಾಹಟಿ: ಇಂದೋರ್ ಉದ್ಯಮಿ ರಾಜಾ ರಘುವಂಶಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಘಾಲಯ ಪೊಲೀಸರು ಶನಿವಾರ 790 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ರಘುವಂಶಿ ಅವರ ಪತ್ನಿ ಸೋನಮ್, ಆಕೆಯ ಪ್ರಿಯಕರ ರಾಜ್ ಕುಶ್ವಾಹ(ಇಬ್ಬರೂ ಪ್ರಮುಖ ಆರೋಪಿಗಳು) ಮತ್ತು ಇತರ ಮೂವರು ಕೊಲೆಗಾರರಾದ ಆಕಾಶ್ ಸಿಂಗ್ ರಜಪೂತ್, ವಿಶಾಲ್ ಸಿಂಗ್ ಚೌಹಾಣ್ ಹಾಗೂ ಆನಂದ್ ಕುರ್ಮಿ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ಇಂದು ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ಸೋನಮ್ ಮತ್ತು ಕುಶ್ವಾಹ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್103(1), 238(ಎ) ಮತ್ತು 61(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೊಲೆ, ಕ್ರಿಮಿನಲ್ ಪಿತೂರಿ ಮತ್ತು ಸಾಕ್ಷ್ಯ ನಾಶ ಅಥವಾ ಸುಳ್ಳು ಮಾಹಿತಿ ನೀಡಿದ ಆರೋಪ ಹೊರಿಸಲಾಗಿದೆ.
ಸಾಕ್ಷ್ಯ ನಾಶಪಡಿಸಿದ ಆರೋಪದ ಮೇಲೆ ಇತರ ಮೂವರು ಆರೋಪಿಗಳಾದ ಲೋಕೇಂದ್ರ ತೋಮರ್, ಬಲ್ಲ ಅಹಿರ್ವಾರ್ ಮತ್ತು ಸಿಲೋಮ್ ಜೇಮ್ಸ್ ವಿರುದ್ಧ ಪೂರಕ ಆರೋಪಪಟ್ಟಿ ಸಲ್ಲಿಸಲಾಗುವುದು. ಕೊಲೆಯಾದ ವಾರಗಳ ನಂತರ ಮಧ್ಯಪ್ರದೇಶದ ವಿವಿಧ ಭಾಗಗಳಿಂದ ಆರೋಪಿಗಳನ್ನು ಬಂಧಿಸಲಾಗಿತ್ತು.
ಪೂರ್ವ ಖಾಸಿ ಹಿಲ್ಸ್ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸೈಮ್ ಮಾತನಾಡಿ, ಸೋನಮ್, ಕುಶ್ವಾಹ ಜೊತೆ ಸಂಬಂಧ ಹೊಂದಿದ್ದಳು ಮತ್ತು ಅವಳು, ಪ್ರಿಯಕರ ಹಾಗೂ ಇತರ ಮೂವರು ಕೊಲೆಗಾರರೊಂದಿಗೆ ಸೇರಿ ಸುಂದರವಾದ ಸೊಹ್ರಾ(ಚೆರಾಪುಂಜಿ)ಗೆ ಹನಿಮೂನ್ ಪ್ರವಾಸದ ಸಮಯದಲ್ಲಿ ತನ್ನ ಗಂಡನನ್ನು ಕೊಲ್ಲಲು ಸಂಚು ರೂಪಿಸಿದ್ದಳು ಎಂದು ಹೇಳಿದ್ದಾರೆ.
ರಘುವಂಶಿ ಮತ್ತು ಸೋನಮ್ ಮೇ 22 ರಂದು ಮೇಘಾಲಯಕ್ಕೆ ಹನಿಮೂನ್ ಗೆ ಆಗಮಿಸಿದ್ದರು. ಶಿಲ್ಲಾಂಗ್‌ನಲ್ಲಿ ಬಾಡಿಗೆಗೆ ಪಡೆದ ಸ್ಕೂಟರ್‌ನಲ್ಲಿ ಸೊಹ್ರಾಗೆ ತೆರಳಿದ ಮರುದಿನ ಅವರು ಕಾಣೆಯಾಗಿದ್ದಾರೆ ಎಂದು ವರದಿಯಾಗಿತ್ತು. ಜೂನ್ 2 ರಂದು, ಪೊಲೀಸರು ಸೊಹ್ರಾದ ವೈಸಾವ್ಡಾಂಗ್ ಜಲಪಾತದ ಬಳಿ ಆಳವಾದ ಕಂದಕದಲ್ಲಿ ರಘುವಂಶಿಯ ಶವ ಪತ್ತೆಯಾಗಿತ್ತು. ನಂತರ, ಕೊಲೆಗೆ ಬಳಸಲಾಗಿದೆ ಎನ್ನಲಾದ ಎರಡು ಮಚ್ಚುಗಳನ್ನು ವಶಪಡಿಸಿಕೊಳ್ಳಲಾಯಿತು.