ನವದೆಹಲಿ: ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಅವರ ಪರವಾಗಿ ಎನ್‌ಡಿಎ ಪಕ್ಷವು ಎಚ್ಚರಿಕೆಯಿಂದ ಯೋಜಿಸಿದ ಕಾರ್ಯತಂತ್ರವು ಭರ್ಜರಿ ಗೆಲುವು ತಂದುಕೊಟ್ಟಿತು.
ರಾಧಾಕೃಷ್ಣನ್ ಅವರು ತಮ್ಮ ಪ್ರತಿಸ್ಪರ್ಧಿ, ವಿರೋಧ ಪಕ್ಷದ ಬಿ. ಸುದರ್ಶನ ರೆಡ್ಡಿ ವಿರುದ್ಧ ಒಟ್ಟು 452 ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದರು, ಸುದರ್ಶನ್ ರೆಡ್ಡಿ ಅವರು 300 ಮತಗಳನ್ನು ಗಳಿಸಿದರು. ಫಲಿತಾಂಶವು ಮೊದಲೇ ತೀರ್ಮಾನವಾಗಿದ್ದರೂ, ಎನ್‌ಡಿಎ ಅಭ್ಯರ್ಥಿ ನಿರೀಕ್ಷೆಗಿಂತ 14 ಹೆಚ್ಚು ಮತಗಳನ್ನು ಪಡೆದರು.
ಎನ್ ಡಿಎ ಅಭ್ಯರ್ಥಿ ಗೆದ್ದಿದ್ದು ಹೇಗೆ
ಪ್ರತಿಯೊಬ್ಬ ಸದಸ್ಯರೂ ಮತದಾನ ಮಾಡುವಂತೆ ಖಚಿತಪಡಿಸಿಕೊಳ್ಳಲು ಚುನಾವಣಾ ಕಾರ್ಯತಂತ್ರದ ಕುರಿತು ಎನ್‌ಡಿಎ ಪಾಲುದಾರರೊಂದಿಗೆ ಒಂದು ಡಜನ್‌ಗೂ ಹೆಚ್ಚು ಸಭೆಗಳನ್ನು ನಡೆಸಲಾಯಿತು. ಈ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರಚಾರವನ್ನು ಮುನ್ನಡೆಸುತ್ತಿದ್ದ ಬಿಜೆಪಿ, ಲೋಕಸಭೆ ಮತ್ತು ರಾಜ್ಯಸಭೆಯ ಪ್ರತಿಯೊಬ್ಬ ಎನ್‌ಡಿಎ ಸಂಸದರು ತಾವು ತೊಡಗಿಸಿಕೊಂಡಿದ್ದೇವೆ ಎಂಬ ಮನೋಭಾವ ಬರುವಂತೆ ಎನ್‌ಡಿಎ ಕಾರ್ಯತಂತ್ರದ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ನಿಯೋಜಿಸಲಾದವರಲ್ಲಿ ಒಬ್ಬರಾದ ಹಿರಿಯ ಬಿಜೆಪಿ ನಾಯಕರೊಬ್ಬರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್(The New Indian Express) ಪತ್ರಿಕೆಗೆ ತಿಳಿಸಿದರು.
ಜಗದೀಪ್ ಧಂಖರ್ ರಾಜೀನಾಮೆ ನೀಡಿದ ಕೂಡಲೇ ಬಿಜೆಪಿ ರಾಧಾಕೃಷ್ಣನ್ ಅವರನ್ನು ಉಪ ರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಆಯ್ಕೆ ಮಾಡಿತು. 68 ವರ್ಷ ವಯಸ್ಸಿನ ರಾಧಾಕೃಷ್ಣನ್ ಅವರ ಉಪ ರಾಷ್ಟ್ರಪತಿ ಸ್ಪರ್ಧೆಯಲ್ಲಿ ಹಿಂದಿನ ಯಾವುದೇ ಅಭ್ಯರ್ಥಿಗಿಂತ ಹೆಚ್ಚು ಸಕ್ರಿಯವಾಗಿ ಎನ್ ಡಿಎ ಸಂಸದರ ಮುಂದೆ ಪ್ರಚಾರ ನಡೆಸಿದ್ದು ಕಂಡುಬಂತು.
ಅವರು ನೂರಾರು NDA ಸಂಸದರನ್ನು ಭೇಟಿ ಮಾಡಿದ್ದರು. ವಿರೋಧ ಪಕ್ಷದ ಕೆಲವು ಸದಸ್ಯರ ಬೆಂಬಲವನ್ನು ಕೋರಿದರು, ಇದನ್ನು ಅನೇಕರು ಈ ಹುದ್ದೆಗೆ ಸಜ್ಜನಿಕೆಯ ಅಭಿಯಾನ ಎಂದು ಬಣ್ಣಿಸಿದರು. ಅವರ ಪ್ರಯತ್ನಗಳು ಫಲ ನೀಡಿತು, 452 ಮೊದಲ ಪ್ರಾಶಸ್ತ್ಯದ ಮತಗಳನ್ನು ಲಭಿಸಿದರು. ಚಲಾವಣೆಯಾದ 754 ಮತಗಳಲ್ಲಿ 15 ಅಮಾನ್ಯವೆಂದು ಘೋಷಿಸಲಾಯಿತು.
ಮತದಾನ ಹೇಗಾಯಿತು
ಉಪ ರಾಷ್ಟ್ರಪತಿ ಚುನಾವಣೆಯಲ್ಲಿ 150 ಮತಗಳ ಅಂತರವು ಅತ್ಯಂತ ಕಡಿಮೆಯಾದರೂ, ಧಂಖರ್ ರಾಜೀನಾಮೆ ನೀಡಿದ ದಿನದಿಂದ ಎನ್‌ಡಿಎ ಒಗ್ಗಟ್ಟಿನ ಪ್ರದರ್ಶನವನ್ನು ನೀಡುವಲ್ಲಿ ಯಶಸ್ವಿಯಾದ ರೀತಿ ವಿರೋಧ ಪಕ್ಷದ ಅನೇಕರಿಗೆ ಮೈತ್ರಿ ನಿರ್ವಹಣೆಯ ಪಾಠವನ್ನು ನೀಡಿತು ಎಂದು ಬಿಜೆಪಿ ನಾಯಕರೊಬ್ಬರು ಹೇಳುತ್ತಾರೆ. ಫಲಿತಾಂಶ ಬಹುತೇಕ ಖಚಿತವಾಗಿದ್ದರೂ, ವಿರೋಧ ಪಕ್ಷದ ಸಂಸದರಿಂದ ಅಡ್ಡ ಮತದಾನವಾಗಿದೆ ಎಂದು ಮತದಾನದ ಅಂಕಿಅಂಶಗಳು ಸೂಚಿಸಿವೆ.
NDA ಅಭ್ಯರ್ಥಿ ಆಯ್ಕೆ ಹೇಗಾಯಿತು
ಸಿಪಿ ರಾಧಾಕೃಷ್ಣನ್ ಅವರ ವ್ಯಾಪಕ ರಾಜಕೀಯ ಮತ್ತು ಆಡಳಿತಾತ್ಮಕ ಅನುಭವದಿಂದಾಗಿ, ಆಖೈರು ಮಾಡಿದ ಮೂರು ಹೆಸರುಗಳಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಆಯ್ಕೆಯಾದರು. ಅವರ ಆಯ್ಕೆಯನ್ನು ತಮಿಳುನಾಡಿನಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನು ವಿಸ್ತರಿಸಲು ಮತ್ತು ಕೇಸರಿ ಪಕ್ಷವು ರಾಷ್ಟ್ರೀಯ ಪ್ರಾತಿನಿಧ್ಯದ ವಿಷಯಗಳಲ್ಲಿ ದಕ್ಷಿಣದ ಮೇಲೆ ತಾರತಮ್ಯ ಮಾಡುವುದಿಲ್ಲ ಎಂದು ಸೂಚಿಸಲು ಬಿಜೆಪಿಯ ಪ್ರಯತ್ನಗಳ ಭಾಗವಾಗಿಯೂ ನೋಡಲಾಯಿತು. ರಾಧಾಕೃಷ್ಣನ್ ಅವರ ಆಯ್ಕೆಯ ಹಿಂದಿನ ಮತ್ತೊಂದು ಮಹತ್ವದ ಅಂಶವೆಂದರೆ ಆರ್‌ಎಸ್‌ಎಸ್‌ನೊಂದಿಗಿನ ಅವರ ದೀರ್ಘಕಾಲದ ಸಂಬಂಧ.
'ಪಚೈ ತಮಿಳನ್' (ನಿಜವಾದ ತಮಿಳಿಗ) ಎಂದು ವರ್ಣಿಸಲ್ಪಟ್ಟ ರಾಧಾಕೃಷ್ಣನ್ ಅವರನ್ನು ಬಿಜೆಪಿ ನೇತೃತ್ವದ ಎನ್‌ಡಿಎಯ ಉಪ-ರಾಷ್ಟ್ರಪತಿ ಅಭ್ಯರ್ಥಿಯಾಗಿ ಹೆಸರಿಸಲಾಯಿತು.
ರಾಧಾಕೃಷ್ಣನ್ ಹದಿಹರೆಯದವನಾಗಿದ್ದಾಗ ಆರ್‌ಎಸ್‌ಎಸ್‌ಗೆ ಸೇರಿದ್ದರು. ಸಂಘಟನೆಯಲ್ಲಿ ಮತ್ತು ನಂತರ ಬಿಜೆಪಿಯೊಳಗೆ ಉನ್ನತ ಹುದ್ದೆಗಳನ್ನು ಅಲಂಕರಿಸಿದರು, ಅವರು ಒಬಿಸಿ ಸಮುದಾಯಕ್ಕೆ ಸೇರಿದವರು, ಉಪ ರಾಷ್ಟ್ರಪತಿ ಸ್ಥಾನಕ್ಕೆ ಅವರ ಆಯ್ಕೆಯು ಒಬಿಸಿ ಕಾರಣಗಳ ಪ್ರತಿಪಾದಕ ಎಂಬ ಬಿಜೆಪಿಯ ಹೇಳಿಕೆಗೆ ಮತ್ತೊಂದು ಅಂಶವನ್ನು ಸೇರಿಸುತ್ತದೆ.