ನವದೆಹಲಿ: ಉತ್ತರ ದೆಹಲಿಯ ಮೌರಿಸ್ ನಗರ ಪ್ರದೇಶದಲ್ಲಿ ಚಲಿಸುವ ಕಾರಿನಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 48 ವರ್ಷದ ಕ್ಯಾಬ್ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಈ ಘಟನೆ ಸೋಮವಾರ ನಡೆದಿದೆ. ಸಂತ್ರಸ್ತ ಯುವತಿ, ತನ್ನ ವಿಶ್ವವಿದ್ಯಾಲಯಕ್ಕೆ ಹೋಗಲು ಕ್ಯಾಬ್ ಬುಕ್ ಮಾಡಿದ್ದು, ಕ್ಯಾಬ್ ಚಾಲಕ ಆಕೆಯನ್ನು ಮುಂದೆ ಕುಳಿತುಕೊಳ್ಳಲು ಕೇಳಿಕೊಂಡಿದ್ದಾನೆ. ಅದರಂತೆ ಮುಂದೆ ಕುಳಿತುಕೊಂಡ ವಿದ್ಯಾರ್ಥಿನಿಗೆ ಚಾಲಕ ಅನುಚಿತವಾಗಿ ಸ್ಪರ್ಶಿಸಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಪ್ರಯಾಣದ ಮಧ್ಯದಲ್ಲಿ, ಮಹಿಳೆ ವಾಹನದಿಂದ ಇಳಿದು ಪೊಲೀಸರನ್ನು ಸಂಪರ್ಕಿಸಿದ್ದು, ಆರೋಪಿ ಪರಾರಿಯಾಗಿದ್ದಾನೆ.
ವಿದ್ಯಾರ್ಥಿನಿಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಕ್ಯಾಬ್‌ನ ಅಗ್ರಿಗೇಟರ್‌ನಿಂದ ವಿವರಗಳನ್ನು ಪಡೆದ ನಂತರ ಆರೋಪಿಯನ್ನು ಬಂಧಿಸಲಾಗಿದೆ.
ಕ್ಯಾಬ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.