ನವದೆಹಲಿ: ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಕೆಲವೇ ದಿನ ಉಳಿದಿರುವಂತೆಯೇ ಹಠಾತ್ ಬೆಳವಣಿಗೆಯೊಂದರಲ್ಲಿ 43 ಬಿಜೆಪಿ ಸದಸ್ಯರು ಗುರುವಾರ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.
ಉಖ್ರುಲ್ ಜಿಲ್ಲೆಯ ಫುಂಗ್ಯಾರ್ ಕ್ಷೇತ್ರದ ಬಿಜೆಪಿ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ ಎಂದು ಪಕ್ಷದ ಅಧಿಕಾರಿಯೊಬ್ಬರನ್ನು ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಪಕ್ಷದೊಳಗಿನ ಪ್ರಸ್ತುತ ಸ್ಥಿತಿಯ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಸಮಾಲೋಚನೆ, ಒಳಗೊಳ್ಳುವಿಕೆ ಮತ್ತು ತಳಮಟ್ಟದ ನಾಯಕರಿಗೆ ಗೌರವದ ಕೊರತೆಯ ಕಾರಣದಿಂದ ತಾವು ರಾಜೀನಾಮೆ ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.
"ಪಕ್ಷ ಮತ್ತು ಅದರ ಸಿದ್ಧಾಂತಕ್ಕೆ ನಮ್ಮ ನಿಷ್ಠೆ ಯಾವಾಗಲೂ ಅಚಲವಾಗಿದೆ. ನಮ್ಮ ಸಮುದಾಯ ಮತ್ತು ಮಣಿಪುರದ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುವ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ ಎಂದು ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.
ನಾಗಾ ಬುಡಕಟ್ಟು ಸಮುದಾಯ ಬಹುಸಂಖ್ಯಾತದ ಜಿಲ್ಲೆಯಲ್ಲಿ ಪಕ್ಷದ ಮಂಡಲ ಅಧ್ಯಕ್ಷರು, ಮಹಿಳಾ, ಯುವ ಮತ್ತು ಕಿಸಾನ್ ಮೋರ್ಚಾಗಳ ಮುಖ್ಯಸ್ಥರು ಮತ್ತು ಕ್ಷೇತ್ರದ ಬೂತ್ ಮಟ್ಟದ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ. ಈ ಕುರಿತು ರಾಜ್ಯ ಬಿಜೆಪಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪ್ರಧಾನಿ ಮೋದಿ ಅವರು ಸೆಪ್ಟೆಂಬರ್ 13 ರಂದು ಮಣಿಪುರಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ.
ಮೇ 2023 ರಲ್ಲಿ ಮೈಟೀಸ್ ಮತ್ತು ಕುಕಿಗಳ ನಡುವೆ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಮಣಿಪುರಕ್ಕೆ ಭೇಟಿ ನೀಡುತ್ತಿದ್ದಾರೆ. ಜನಾಂಗೀಯ ಹಿಂಸಾಚಾರದಿಂದ ಕನಿಷ್ಠ 260 ಜನರ ಹತ್ಯೆಯಾಗಿದ್ದು, ಸಾವಿರಾರು ಜನರು ನಿರಾಶ್ರಿತರಾಗಿರುವ ರಾಜ್ಯಕ್ಕೆ ಭೇಟಿ ನೀಡದ ಪ್ರಧಾನಿ ಮೋದಿ ವಿರುದ್ಧ ಪ್ರತಿಪಕ್ಷಗಳು ತೀವ್ರ ಟೀಕಾ ಪ್ರಹಾರ ನಡೆಸುತ್ತಿವೆ.
ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ಕೇಂದ್ರ ಸರ್ಕಾರ ರಾಷ್ಟ್ರಪತಿ ಆಳ್ವಿಕೆ ಹೇರಿದೆ. 2027 ರವರೆಗೆ ಅಧಿಕಾರಾವಧಿ ಹೊಂದಿರುವ ರಾಜ್ಯ ವಿಧಾನಸಭೆಯನ್ನು ಅಮಾನತುಗೊಳಿಸಲಾಗಿದೆ.