ಹೈದರಾಬಾದ್: ಮಹಿಳೆಗೆ ಕುಕ್ಕರ್ನಿಂದ ತಲೆಗೆ ಹೊಡೆದು, ಕತ್ತು ಸೀಳಿ ಕೊಲೆ ಮಾಡಿ, ಬಾತ್ ರೂಮ್ಗೆ ಹೋಗಿ ಸ್ನಾನ ಮಾಡಿ, ಕಳ್ಳ ಅಲ್ಲಿಂದ ಪರಾರಿಯಾಗಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಇಬ್ಬರು ವ್ಯಕ್ತಿಗಳು ಮನೆಯನ್ನು ಲೂಟಿ ಮಾಡಿ, ಆಕೆಯ ಮನೆಯಲ್ಲಿಯೇ ಸ್ನಾನ ಮಾಡಿ, ರಕ್ತಸಿಕ್ತ ಬಟ್ಟೆಗಳನ್ನು ಬಿಟ್ಟು ಅಪರಾಧ ಸ್ಥಳದಿಂದ ಪರಾರಿಯಾಗಿದ್ದಾರೆ. 50 ವರ್ಷದ ರೇಣು ಅಗರ್ವಾಲ್ ಕೊಲೆಯಾದ ಮಹಿಳೆ.
ರೇಣು ಅಗರ್ವಾಲ್ ತನ್ನ ಪತಿ ಹಾಗೂ ಮಗನೊಂದಿಗೆ ಸೈಬರಾಬಾದ್‌ನ ಐಟಿ ಕೇಂದ್ರದಲ್ಲಿರುವ ಗೇಟೆಡ್ ಸಮುದಾಯವಾದ ಸ್ವಾನ್ ಲೇಕ್ ಅಪಾರ್ಟ್‌ಮೆಂಟ್‌ನ 13 ನೇ ಮಹಡಿಯಲ್ಲಿ ವಾಸವಾಗಿದ್ದರು. ಬೆಳಗ್ಗೆ 10 ಗಂಟೆ ಸುಮಾರಿಗೆ ಅಗರ್ವಾಲ್ ತಮ್ಮ ಮಗನೊಂದಿಗೆ ಕೆಲಸಕ್ಕೆ ತೆರಳಿದ್ದರು. ರೇಣು ಅವರ ಪತಿ ಪದೇ ಪದೇ ಕರೆ ಮಾಡಿದರೂ ರೇಣು ಉತ್ತರಿಸದಿದ್ದಾಗ, 5 ಗಂಟೆ ಸುಮಾರಿಗೆ ಮನೆಗೆ ಬಂದಿದ್ದಾರೆ.
ಬಾಗಿಲು ಲಾಕ್ ಆಗಿದ್ದರಿಂದ, ಪ್ಲಂಬರ್ ಸಹಾಯದಿಂದ ಬಾಲ್ಕನಿಯಿಂದ ಹೋಗಿ ಬಾಗಿಲು ತೆರೆದಾಗ ರೇಣು ಮೃತಪಟ್ಟಿರುವುದು ಕಂಡುಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ತನಿಖೆ ಆರಂಭಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಆ ಇಬ್ಬರು ಆರೋಪಿಗಳು ಮನೆಕೆಲಸಗಾರರು ಎಂಬುದು ತಿಳಿದುಬಂದಿದೆ. ಒಬ್ಬರು ಅಗರ್ವಾಲ್ ಅವರ ಮನೆಯಲ್ಲಿ ಮತ್ತು ಇನ್ನೊಬ್ಬರು ಪಕ್ಕದ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಇಬ್ಬರೂ 13 ನೇ ಮಹಡಿಗೆ ಹೋಗಿರುವುದು ಕಂಡುಬಂದಿದೆ. ಈ ಇಬ್ಬರು ವ್ಯಕ್ತಿಗಳು ಕೊಲೆ ಮಾಡಿ ರಾಂಚಿಗೆ ಹೋಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಗರ್ವಾಲ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹರ್ಷ ಜಾರ್ಖಂಡ್ ಮೂಲದವರಾಗಿದ್ದು, ಸುಮಾರು 10 ದಿನಗಳ ಹಿಂದೆ ಕೋಲ್ಕತ್ತಾದ HR ಏಜೆನ್ಸಿಯ ಮೂಲಕ ನೇಮಕಗೊಂಡಿದ್ದರು.