ನವದೆಹಲಿ: ದಿವಂಗತ ಕೈಗಾರಿಕೋದ್ಯಮಿ ಸಂಜಯ್ ಕಪೂರ್ ಅವರ ಸುಮಾರು 30,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಕುರಿತು ಹೈಕೋರ್ಟ್ ನಲ್ಲಿ ನಡೆಯುತ್ತಿರುವ ತಗಾದೆ ಇಂದು ಹೊಸ ಆಯಾಮವನ್ನೇ ಪಡೆದು ಕೋರ್ಟ್ ಹಾಲ್ ನಲ್ಲೇ ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರ ವಕೀಲರು ಜಟಾಪಟಿ ನಡೆಸಿರುವ ಘಟನೆ ವರದಿಯಾಗಿದೆ.
ಹೌದು.. ದಿವಂಗತ ಕೈಗಾರಿಕೋದ್ಯಮಿ ಸಂಜಯ್ ಕಪೂರ್ ಅವರ ಸುಮಾರು 30,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಕುರಿತ ದೆಹಲಿ ಹೈಕೋರ್ಟ್ ವಿಚಾರಣೆ ವೇಳೆ ಇಬ್ಬರು ವಕೀಲರು ಪರಸ್ಪರ ಜಟಾಪಟಿ ನಡೆಸಿದ್ದಾರೆ. ಈ ಕುರಿತ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದ್ದು, 21 ಸೆಕೆಂಡುಗಳ ಕ್ಲಿಪ್‌ನಲ್ಲಿ ವಕೀಲ ಮಹೇಶ್ ಜೇಠ್ಮಲಾನಿ ಮತ್ತು ವಕೀಲ ರಾಜೀವ್ ನಾಯರ್ ಪರಸ್ಪರ ವಾಕ್ಸಮರ ನಡೆಸಿದ್ದಾರೆ.
ವಕೀಲ ಜೇಠ್ಮಲಾನಿ ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರನ್ನು ಪ್ರತಿನಿಧಿಸುತ್ತಿದ್ದು, ಅವರ ಮಕ್ಕಳು ತಮ್ಮ ದಿವಂಗತ ತಂದೆಯ ಆಸ್ತಿಯಲ್ಲಿ ತಲಾ ಐದನೇ ಒಂದು ಪಾಲನ್ನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ವಕೀಲ ರಾಜೀವ್ ನಾಯರ್ ಅವರು ಸುಂಜಯ್ ಅವರ ಪತ್ನಿ ಪ್ರಿಯಾ ಅವರನ್ನು ಪ್ರತಿನಿಧಿಸುತ್ತಿದ್ದಾರೆ. ಸುಂಜಯ್ ಅವರು ತಮ್ಮ ಸಂಪೂರ್ಣ ವೈಯಕ್ತಿಕ ಆಸ್ತಿಯನ್ನು ಪ್ರಿಯಾ ಅವರಿಗೆ ಹಸ್ತಾಂತರಿಸುವ ವಿಲ್ ಅನ್ನು ಹೊಂದಿದ್ದರು ಎಂದು ಹೇಳಿಕೊಂಡಿದ್ದಾರೆ.
ಕೋರ್ಟ್ ಹಾಲ್ ನಲ್ಲಿ ಆಗಿದ್ದೇನು?
ಸಂಜಯ್ ಕಪೂರ್ ಪತ್ನಿ ಪ್ರಿಯಾ ಪರ ರಾಜೀವ್ ನಾಯರ್ ವಾದ ಮಂಡಿಸುತ್ತಿದ್ದಾಗ ಮಹೇಶ್ ಜೇಠ್ಮಲಾನಿ ಅಡ್ಡಿಪಡಿಸಿದರು. ಈ ವೇಳೆ ಧನಿ ಎತ್ತಿದ ವಕೀಲ ನಾಯರ್, 'ದಯವಿಟ್ಟು ನನಗೆ ಅಡ್ಡಿಪಡಿಸಬೇಡಿ. ನನಗೆ ಅಡ್ಡಿಪಡಿಸುವ ಅಭ್ಯಾಸವಿಲ್ಲ' ಎಂದರು. ಈ ವೇಳೆ ವಕೀಲ ಜೇಠ್ಮಲಾನಿ, 'ಹಾಗಾದರೆ ನೀವೇ ನಿಮ್ಮ ಔಷಧಿಯ ರುಚಿ ನೋಡಬೇಕು. ಮತ್ತು ನನ್ನ ಮೇಲೆ ಕೂಗಬೇಡಿ ಎಂದು ಖಾರವಾಗಿ ಹೇಳಿದರು.
ಈ ವೇಳೆ ಮಾತನಾಡಿದ ವಕೀಲ ನಾಯರ್, 'ನೀವು ನನ್ನ ವಾದಮಂಡನೆಗೆ ಅಡ್ಡಿಪಡಿಸಿದ್ದೀರಿ ಎಂದಾಗ ಇದಕ್ಕೆ ಪ್ರತಿಕ್ರಿಯಿಸಿದ ಜೇಠ್ಮಲಾನಿ, 'ನನ್ನ ಮೇಲೆ ಕೂಗಬೇಡಿ... ಕೌನ್ಸಿಲ್ ಗೆ ಗೌರವ ನೀಡಿ.. ನೀವು ಕೂಗಿದರೆ ಅದಕ್ಕೆ ತಕ್ಕ ಪ್ರತಿಕ್ರಿಯೆ ದೊರೆಯುತ್ತದೆ ಎಂದರು. ಇದಕ್ಕೆ ವಕೀಲ ನಾಯರ್, ನೀವೇಕೆ ಅದನ್ನು ನೀಡುತ್ತಿಲ್ಲ ಎಂದ ಮರು ಪ್ರಶ್ನಿಸಿದರು. ಇದಕ್ಕೆ ಕಸಿವಿಸಿಗೊಂಡ ಜೇಠ್ಮಲಾನಿ, "ನಾನು ತಳ್ಳುವವನಲ್ಲ' ಎಂದು ಉತ್ತರಿಸಿದರು.
ಏನಿದು ಪ್ರಕರಣ?
ಕರಿಷ್ಮಾ ಕಪೂರ್ ಅವರು ಕೈಗಾರಿಕೋದ್ಯಮಿ ಸಂಜಯ್ ಕಪೂರ್ ಅವರ ಎರಡನೇ ಪತ್ನಿ. ಸಂಜಯ್ 3 ಮದುವೆಯಾಗಿದ್ದರು. ಇದೀಗ ಕರಿಷ್ಮಾ ಅವರ ಮಕ್ಕಳಾದ ಸಮೈರಾ ಕಪೂರ್ ಮತ್ತು ಕಿಯಾನ್ ಕಪೂರ್, ತಂದೆಯ ಆಸ್ತಿಯಲ್ಲಿ ತಮಗೆ ಪಾಲು ನೀಡುವಂತೆ ದೆಹಲಿ ಹೈಕೋರ್ಟ್‌ಗೆ ಅರ್ಜಿ ಹಾಕಿದ್ದಾರೆ.
ಕರಿಷ್ಮಾ ಅವರೊಂದಿಗೆ ವಾಸಿಸುವ ಇಬ್ಬರು ಮಕ್ಕಳು, ಸಂಜಯ್ ಅವರ ಮೂರನೇ ಪತ್ನಿ ಪ್ರಿಯಾ ಕಪೂರ್ ಅವರು ಸುಮಾರು 30,000 ಕೋಟಿ ರೂಪಾಯಿ ಮೌಲ್ಯದ ಸಂಪೂರ್ಣ ಸಂಪತ್ತನ್ನು ಪಡೆಯಲು ವಿಲ್ ಬದಲಾಯಿಸಿದ್ದಾರೆ ಅಥವಾ ತಿದ್ದುಪಡಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕರಿಷ್ಮಾ ಮಕ್ಕಳು ತಮ್ಮ ಅರ್ಜಿಯಲ್ಲಿ, ಆಸ್ತಿಯ ಐದನೇ ಒಂದು ಭಾಗವನ್ನು ತಮಗೆ ಹಂಚಬೇಕು ಮತ್ತು ಕಾನೂನುಬದ್ಧ ಉತ್ತರಾಧಿಕಾರಿಗಳೆಂದು ತಮ್ಮ ಸ್ಥಾನಮಾನವನ್ನು ಪ್ರತಿಪಾದಿಸಬೇಕೆಂದು ಮನವಿ ಮಾಡಿದ್ದಾರೆ. ಇವರ ವಕೀಲರು, ಸಮೈರಾ ಮತ್ತು ಕಿಯಾನ್, ತಮ್ಮ ತಂದೆಯ ಮರಣದವರೆಗೂ ಅವರೊಂದಿಗೆ ನಿರಂತರ ಆತ್ಮೀಯ ಬಾಂಧವ್ಯ ಹೊಂದಿದ್ದರೆಂದು ತಿಳಿಸಿದ್ದಾರೆ.
ಸಂಜಯ್ ಮೊದಲು ಫ್ಯಾಷನ್ ಡಿಸೈನರ್ ನಂದಿತಾ ಮಹತಾನಿ, ನಂತರ ಕರಿಷ್ಮಾ ಕಪೂರ್ (2003–2016) ಬಳಿಕ 2017ರಲ್ಲಿ ಪ್ರಿಯಾ ಸಚ್‌ದೇವ್ ಅವರನ್ನು ವಿವಾಹವಾಗಿದ್ದರು.