ಮುಂಬೈ: ಏಷ್ಯಾ ಕಪ್ 2025ರ ಪಂದ್ಯಾವಳಿಯಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ವೇಳೆ 1.5 ಲಕ್ಷ ಕೋಟಿ ರೂ.ಗಳಷ್ಟು ಜೂಜಾಟ ನಡೆದಿದ್ದು, ಅದರಲ್ಲಿ 25,000 ಕೋಟಿ ರೂ.ಗಳು ಪಾಕಿಸ್ತಾನಕ್ಕೆ ಹೋಗಿದೆ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ-ಪಾಕಿಸ್ತಾನ ಪಂದ್ಯದಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ 1,000 ಕೋಟಿ ರೂ.ಗಳು ಹೋಗಿದೆ. ಈ ಹಣವನ್ನು ನಮ್ಮ ವಿರುದ್ಧ ಬಳಸಲಾಗುತ್ತದೆ' ಎಂದು ಹೇಳಿದರು.
'ನಿನ್ನೆ ನಡೆದ ಪಂದ್ಯದಲ್ಲಿ 1.5 ಲಕ್ಷ ಕೋಟಿ ರೂಪಾಯಿಗಳ ಜೂಜಾಟ ನಡೆದಿದ್ದು, ಅದರಲ್ಲಿ 25,000 ಕೋಟಿ ರೂಪಾಯಿ ಪಾಕಿಸ್ತಾನಕ್ಕೆ ಹೋಗಿದೆ. ಈ ಹಣವನ್ನು ನಮ್ಮ ವಿರುದ್ಧ ಬಳಸಲಾಗುತ್ತದೆ. ಸರ್ಕಾರ ಅಥವಾ ಬಿಸಿಸಿಐಗೆ ಇದು ತಿಳಿದಿಲ್ಲವೇ?' ಎಂದು ರಾವುತ್ ಹೇಳಿದ್ದಾರೆ.
ಪಾಕಿಸ್ತಾನ ವಿರುದ್ಧ ಭಾರತ ತಂಡ ಏಳು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಪಂದ್ಯದ ಬಳಿಕ ತಂಡದ ಆಟಗಾರರು ಪಾಕಿಸ್ತಾನ ತಂಡದ ಆಟಗಾರರೊಂದಿಗೆ ಸಾಂಪ್ರದಾಯಿಕ ಹ್ಯಾಂಡ್‌ಶೇಕ್ ಅನ್ನು ನಿರಾಕರಿಸಿದರು.
ಪಂದ್ಯವನ್ನು ವಿರೋಧಿಸಿದ್ದ ರಾವುತ್, ಇದನ್ನು ಹಾಸ್ಯಾಸ್ಪದ ಎಂದು ಕರೆದರು ಮತ್ತು ಹ್ಯಾಂಡ್‌ಶೇಕ್ ನಿರಾಕರಣೆಯು ಆವೇಶದಿಂದ ಬಂದದ್ದಲ್ಲ ಎಂದು ಹೇಳಿದರು.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಮತ್ತು ಮೇ 7 ರಂದು ಭಾರತ ನಡೆಸಿದ 'ಆಪರೇಷನ್ ಸಿಂಧೂರ' ನಂತರ ಉಭಯ ರಾಷ್ಟ್ರಗಳ ನಡುವೆ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹೆಚ್ಚಾಗಿದೆ. ಈ ಪಂದ್ಯವನ್ನು ಬಹಿಷ್ಕರಿಸುವಂತೆ ಹಲವೆಡೆಗಳಿಂದ ಕೂಗು ಕೇಳಿಬಂದಿದ್ದರೂ, ಪಂದ್ಯವನ್ನು ಆಡಲಾಯಿತು.