ರಾಜಸ್ಥಾನದ ಬಾರ್ಮರ್ ನಗರದ ಸಮೀಪವಿದ ಸದರ್ ಪ್ರದೇಶದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಜುನ್ಜುನುವಿನ 37 ವರ್ಷದ ಮುಖೇಶ್ ಕುಮಾರಿ ಎಂಬಾಕೆಯನ್ನು ಹತ್ಯೆ ಮಾಡಲಾಗಿದೆ. ಅಲ್ಲದೆ ಮುಖೇಶ್ ಕುಮಾರಿ ಮೃತದೇಹ ಆಕೆಯ ಕಾರಿನ ಡ್ರೈವಿಂಗ್ ಸೀಟಿನಲ್ಲಿ ಪತ್ತೆಯಾಗಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಸರ್ಕಾರಿ ಶಿಕ್ಷಕ ಮನರಾಮ್ (38) ಎಂಬಾತನನ್ನು ಬಂಧಿಸಿದ್ದಾರೆ.
ಮುಖೇಶ್ ಕುಮಾರಿ ಸುಮಾರು 600 ಕಿ.ಮೀ ದೂರ ಕ್ರಮಿಸಿದ ನಂತರ ಮನರಾಮ್ ಅವರನ್ನು ಭೇಟಿ ಮಾಡಲು ಅವರ ಮನೆಗೆ ಬಂದಿದ್ದರು ಎಂದು ಎಸ್ಪಿ ನರೇಂದ್ರ ಕುಮಾರ್ ಮೀನಾ ಮಾತನಾಡಿ, ಇಬ್ಬರೂ ಅಕ್ಟೋಬರ್ 2024ರಲ್ಲಿ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದರು. ಇದಾದ ನಂತರ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಸೆಪ್ಟೆಂಬರ್ 10ರಂದು ಮುಖೇಶ್ ಕುಮಾರಿ ಬಾರ್ಮರ್ ತಲುಪಿ ಮನರಾಮ್ ಅವರ ಮನೆಯಲ್ಲಿಯೇ ಇದ್ದರು. ಮನರಾಮ್ ತನ್ನ ಮನೆಯಲ್ಲಿ ಮಹಿಳೆಯನ್ನು ಕೊಂದು, ಶವವನ್ನು ಮಹಿಳೆಯ ಕಾರಿನಲ್ಲಿ ಇರಿಸುವ ಮೂಲಕ ಅದನ್ನು ಅಪಘಾತದಂತೆ ಬಿಂಬಿಸಲು ಪ್ರಯತ್ನಿಸಿದ್ದಾರೆ ಎಂದು ಮೀನಾ ಹೇಳಿದ್ದಾರೆ.
ಕೊಲೆಗೆ ಕಾರಣಗಳು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಆ ಮಹಿಳೆ ಮನರಾಮ್ ಅವರ ಮನೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ಬೆಳಿಗ್ಗೆ 7:30 ಕ್ಕೆ ಘಟನೆ ವರದಿಯಾಗಿದೆ. ರೇಕೊ ಪೊಲೀಸ್ ಠಾಣೆ ಪ್ರದೇಶದ ಶಿವ ನಗರದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಮುಖೇಶ್ ಕುಮಾರಿ ಶವ ಪತ್ತೆಯಾಗಿತ್ತು. ಪೊಲೀಸರು ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್), ಶ್ವಾನ ದಳ ಮತ್ತು ಮೊಬೈಲ್ ಅಪರಾಧ ಘಟಕ (ಎಂಒಯು) ತಂಡಗಳನ್ನು ಸ್ಥಳಕ್ಕೆ ಕಳುಹಿಸಿದ್ದಾರೆ. ಎಸ್‌ಪಿ ನರೇಂದ್ರ ಕುಮಾರ್ ಮೀನಾ ಕೂಡ ಸ್ಥಳಕ್ಕೆ ತಲುಪಿದ್ದು, ತನಿಖೆಯ ನೇತೃತ್ವ ವಹಿಸಿದ್ದಾರೆ. ತಂಡವು ಕಾರು ಮತ್ತು ಮನೆಯಿಂದ ಸಾಧ್ಯವಿರುವ ಎಲ್ಲಾ ಪುರಾವೆಗಳನ್ನು ಸಂಗ್ರಹಿಸಿದೆ.
ಆರೋಪಿ ಚಾವಾ ಗ್ರಾಮದ ನಿವಾಸಿ
ಆರೋಪಿ ಮನರಾಮ್ ಬಾರ್ಮರ್‌ನ ಸದರ್ ಪೊಲೀಸ್ ಠಾಣೆ ಪ್ರದೇಶದ ಚಾವಾ ಗ್ರಾಮದ ನಿವಾಸಿ. ಮೃತ ಮುಖೇಶ್ ಕುಮಾರಿ ಜುನ್ಜುನು ಜಿಲ್ಲೆಯ ಚಿಡಾವಾ ನಿವಾಸಿಯಾಗಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಸ್ನೇಹದ ನಂತರ, ಇಬ್ಬರ ವೈಯಕ್ತಿಕ ಸಂಬಂಧ ಬೆಳೆಯಿತು. ಪ್ರಕರಣದ ಗಂಭೀರತೆಯನ್ನು ಮನಗಂಡ ಪೊಲೀಸರು ಪ್ರತಿಯೊಂದು ಅಂಶದಿಂದಲೂ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಕೊಲೆಗೆ ಕಾರಣ, ಸಂಭಾವ್ಯ ಆರೋಪಿಗಳು ಮತ್ತು ಅದಕ್ಕೆ ಸಂಬಂಧಿಸಿದ ಯಾವುದೇ ಪುರಾವೆಗಳನ್ನು ಮುಂದಿನ ತನಿಖೆಯಿಂದ ಖಚಿತಪಡಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಅಪರಾಧ ಸ್ಥಳ ಮತ್ತು ಕಾರಿನ ತನಿಖೆ ಮುಂದುವರೆದಿದೆ.