ನವದೆಹಲಿ: ಹಿರಿಯ ರಾಜತಾಂತ್ರಿಕ ಅಧಿಕಾರಿ ಗೌರಂಗಲಾಲ್ ದಾಸ್ ಅವರನ್ನು ಬುಧವಾರ ದಕ್ಷಿಣ ಕೊರಿಯಾಗೆ ಭಾರತದ ನೂತನ ರಾಯಭಾರಿಯಾಗಿ ನೇಮಿಸಲಾಗಿದೆ.
1999 ರ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವೆ(ಐಎಫ್‌ಎಸ್) ಅಧಿಕಾರಿಯಾಗಿರುವ ದಾಸ್, ಪ್ರಸ್ತುತ ನವದೆಹಲಿಯಲ್ಲಿರುವ ವಿದೇಶಾಂಗ ಸಚಿವಾಲಯದ(ಎಂಇಎ) ಪ್ರಧಾನ ಕಚೇರಿಯಲ್ಲಿ ನಿರ್ಣಾಯಕ ಪೂರ್ವ ಏಷ್ಯಾ ವಿಭಾಗದ ನೇತೃತ್ವ ವಹಿಸಿದ್ದಾರೆ.
ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಪೂರ್ವ ಲಡಾಖ್ ಗಡಿಯಲ್ಲಿ ಉಂಟಾದ ಬಿಕ್ಕಟ್ಟಿನ ನಂತರ ತೀವ್ರ ಒತ್ತಡಕ್ಕೆ ಸಿಲುಕಿದ್ದ ಭಾರತ ಮತ್ತು ಚೀನಾ ನಡುವಿನ ಸಂಬಂಧಗಳನ್ನು ಸುಧಾರಿಸುವಲ್ಲಿ ದಾಸ್ ಪ್ರಮುಖ ಪಾತ್ರ ವಹಿಸಿದ್ದಾರೆ.
ಪ್ರಸ್ತುತ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ದಾಸ್ ಅವರನ್ನು ಕೊರಿಯಾ ಗಣರಾಜ್ಯಕ್ಕೆ ಭಾರತದ ಮುಂದಿನ ರಾಯಭಾರಿಯಾಗಿ ನೇಮಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
"ಅವರು ಶೀಘ್ರದಲ್ಲೇ ಈ ಹುದ್ದೆಯನ್ನು ವಹಿಸಿಕೊಳ್ಳುವ ನಿರೀಕ್ಷೆಯಿದೆ" ಎಂದು ವಿಶೇಶಾಂಗ ಸಚಿವಾಲಯ ಸಂಕ್ಷಿಪ್ತ ಪ್ರಕಟಣೆಯಲ್ಲಿ ತಿಳಿಸಿದೆ.