ನವದೆಹಲಿ: ದೇಶದಲ್ಲಿ ನಡೆದಿರುವ ಆಪಾದಿತ ಮತ ವಂಚನೆಯನ್ನು ಬಹಿರಂಗಪಡಿಸುವಲ್ಲಿ ಭಾರತೀಯ ಚುನಾವಣಾ ಆಯೋಗಕ್ಕಾಗಿ (ECI) ಕೆಲಸ ಮಾಡುತ್ತಿರುವವರೇ ನನಗೆ ಸಹಾಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ವೋಟ್ ಚೋರಿಯನ್ನು ಬಹಿರಂಗಪಡಿಸುವಲ್ಲಿ ನಾವು ಚುನಾವಣಾ ಆಯೋಗದ ಒಳಗಿನಿಂದ ಸಹಾಯ ಪಡೆಯಲು ಪ್ರಾರಂಭಿಸಿದ್ದೇವೆ. ಇದು ಮೊದಲು ನಡೆಯುತ್ತಿಲ್ಲ. ಈಗ ನಾವು ಆಯೋಗದ ಒಳಗಿನಿಂದ ಮಾಹಿತಿಯನ್ನು ಪಡೆಯುತ್ತಿದ್ದೇವೆ, ಇದು ನಿಲ್ಲುವುದಿಲ್ಲ. ಭಾರತದ ಜನರು ಇದನ್ನು ಸಹಿಸುವುದಿಲ್ಲ. ಮತಗಳನ್ನು ಕದಿಯಲಾಗುತ್ತಿದೆ ಎಂದು ಯುವಕರು ಅರಿತುಕೊಂಡ ನಂತರ, ಅವರ ಶಕ್ತಿ ಹೊರಹೊಮ್ಮುತ್ತದೆ ಎಂದರು.
ಇಂದು ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ವಿಶೇಷ ಸುದ್ದಿಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ ಚೋರಿಗಳನ್ನು ರಕ್ಷಿಸುತ್ತಿದ್ದಾರೆ. ಮತದಾರರ ಪಟ್ಟಿಯಲ್ಲಿ ನಕಲಿ ಮತದಾರರನ್ನು ಅಳಿಸುವ ಮತ್ತು ಸೇರಿಸುವಲ್ಲಿ ವಂಚನೆ ಹೇಗೆ ನಡೆಯುತ್ತಿದೆ ಎಂಬುದರ ಬಗ್ಗೆ ಅವರಿಗೆ ಸಂಪೂರ್ಣವಾಗಿ ತಿಳಿದಿದೆ ಎಂದು ಆರೋಪಿಸಿದರು.
ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 6,000 ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ರಾಜ್ಯದ ಮತ್ತೊಂದು ಕ್ಷೇತ್ರವಾದ ಮಹದೇವಪುರದಲ್ಲಿ ನಡೆದಿರುವ ಅಕ್ರಮಗಳನ್ನು ಸಹ ಅವರು ಉಲ್ಲೇಖಿಸಿದರು,
ಭಾರತದಾದ್ಯಂತ ಮತದಾರರನ್ನು ಅಳಿಸಲು ವಿಶೇಷವಾಗಿ ದಲಿತರು, ಒಬಿಸಿಗಳು, ಆದಿವಾಸಿಗಳು, ಅಲ್ಪಸಂಖ್ಯಾತರು ಮತ್ತು ವಿರೋಧ ಪಕ್ಷವನ್ನು ಬೆಂಬಲಿಸುವ ಇತರರನ್ನು ಗುರಿಯಾಗಿಸಲಾಗಿದೆ. ನಾವು ಇದರ ಬಗ್ಗೆ ಹಲವು ಬಾರಿ ಕೇಳಿದ್ದೇವೆ, ಆದರೆ ಈಗ ನಮ್ಮಲ್ಲಿ ಶೇಕಡಾ 100ರಷ್ಟು ಪುರಾವೆಗಳಿವೆ. ನಾನು ನನ್ನ ದೇಶ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಪ್ರೀತಿಸುತ್ತೇನೆ ಅದನ್ನು ರಕ್ಷಿಸಲು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.