ವಡೋದರಾ: ಸಾಮಾನ್ಯವಾಗಿ ವಿವಿಧ ಬೇಡಿಕಗಳ ಈಡೇರಿಕೆಗಾಗಿ ಜನ ರಸ್ತೆ ತಡೆ ನಡೆಸಿ ಪ್ರತಭಟನೆ ನಡೆಸುತ್ತಾರೆ. ಆದರೆ ಇಲ್ಲೋರ್ವ ಮಹಿಳೆ ರಸ್ತಬದಿ ಪಾನಿಪುರಿಯಲ್ಲಿ ತನಗೆ ಕಡಿಮೆ ಪೂರಿ ನೀಡಿದ್ದಾನೆ ಎಂದು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.
ಹೌದು... ಗುಜರಾತ್‌ನ ವಡೋದರಾದಲ್ಲಿ ಜನಪ್ರಿಯ ಬೀದಿ ಆಹಾರ ಎಂದರೆ ಅದು ಗೋಲ್ಗಪ್ಪಗಳು. ಆದರೆ ಇದೇ ಗೋಲ್ಗಪ್ಪ ವಿಚಾರವಾಗಿ ಮಹಿಳೆಯೊಬ್ಬರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ. ಗೋಲ್ಗಪ್ಪ ಮಾರಾಟಗಾರ ತನಗೆ ಕಡಿಮೆ ಪೂರಿಗಳನ್ನು ನೀಡಿದ್ದಾನೆ ಎಂದು ಮಹಿಳೆ ರಸ್ತೆ ತಡೆ ನಡೆಸಿ ಹೈಡ್ರಾಮಾ ಮಾಡಿದ್ದಾರೆ.
ವಡೋದರ ನಗರದ ಸುರ್‌ಸಾಗರ್ ಸರೋವರ ಪ್ರದೇಶದ ಬಳಿ ಮಹಿಳೆಯೊಬ್ಬರು ರಸ್ತೆ ತಡೆ ನಡೆಸಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ. ಆಕೆ ಬೀದಿ ವ್ಯಾಪಾರಿಯಿಂದ ಹಣಕ್ಕಾಗಿ ಅಲ್ಲ, ಗೋಲ್ಗಪ್ಪಕ್ಕಾಗಿ ಪ್ರತಿಭಟನೆ ನಡೆಸಿದ್ದಾಳೆ ಎಂದು ಆರೋಪಿಸಲಾಗಿದೆ.
ಈ ಕುರಿತು ಮಾತನಾಡಿರುವ ಮಹಿಳೆ, 'ಮಾರಾಟಗಾರ ತನ್ನ 20 ರೂ. ಪಡೆದು ನಿರೀಕ್ಷಿಸಿದ ಆರು ಪೂರಿಗಳ ಬದಲಿಗೆ ಕೇವಲ ನಾಲ್ಕು ಪೂರಿಗಳನ್ನು ಮಾತ್ರ ನೀಡಿದ್ದಾನೆ ಎಂದು ಆಕ್ರೋಶ ವ್ಯಕ್ಚಪಡಿಸಿದ್ದಾಳೆ. ಗೋಲ್ಗಪ್ಪ ಮಾರಾಟಗಾರನ ನಡೆಯಿಂದ ಆಕ್ರೋಶಗೊಂಡ ಮಹಿಳೆ ಧರಣಿ ಪ್ರತಿಭಟನೆ ನಡೆಸಿ, ರಸ್ತೆಯ ಮಧ್ಯದಲ್ಲಿ ಕುಳಿತುಕೊಂಡು ತನ್ನ ಬೇಡಿಕೆ ಈಡೇರುವವರೆಗೂ ತಾನು ಮೇಲೇಳುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಳು.
ಈ ವೇಳೆ ಆ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಯಿತು. ಸ್ಥಳೀಯರು ಆಕೆಯನ್ನು ಮನವೊಲಿಸಲು ಯತ್ನಿಸಿದರೂ ಆಕೆ ಅದಕ್ಕೆ ಒಪ್ಪಲೇ ಇಲ್ಲ. ಬಳಿಕ ಪೊಲೀಸರು ಬಂದು ಆಕೆಯನ್ನು ಸ್ಥಳಾಂತರಿಸಲು ಮುಂದಾದಾಗ ಈ ಪ್ರಕರಣ ನಾಟಕೀಯ ತಿರುವು ಪಡೆಯಿತು. ಈ ವೇಳೆ ಮಹಿಳೆ ಕಣ್ಣೀರು ಸುರಿಸುತ್ತಾ, ಅಧಿಕಾರಿಗಳು ನ್ಯಾಯಯುತ ವ್ಯಾಪಾರವನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಅಂತಿಮವಾಗಿ, ಅಧಿಕಾರಿಗಳು ಮಹಿಳೆಯನ್ನು ಕರೆದುಕೊಂಡು ಹೋಗಿ ಪುನಃ ಗೋಲ್ಗಪ್ಪ ಕೊಡಿಸಿದ್ದಾರೆ. ಅದರೊಂದಿಗೆ ಈ ಪ್ರಕರಣ ಸುಖಾಂತ್ಯಗೊಂಡಿದೆ.