ಉತ್ತರ ಪ್ರದೇಶ: ಖಡಕ್ ಮುಖ್ಯಮಂತ್ರಿ ಎಂದೇ ಹೆಸರಾದ ಯೋಗಿ ಆದಿತ್ಯನಾಥ್ ಆಡಳಿತದ ಉತ್ತರ ಪ್ರದೇಶದಲ್ಲಿ ಶಾಲೆಗೆ ತೆರಳುತ್ತಿದ್ದ ನಾಲ್ವರು ಹದಿಹರೆಯದ ಹುಡುಗಿಯರನ್ನು ಅಪಹರಿಸಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಬಲ್ಲಿಯಾದ ನನ್ಹಿ ಗ್ರಾಮದ ಮನೆಯಿಂದ ಶಾಲೆಗೆ ಹೊರಟ ನಾಲ್ವರು ಹದಿಹರೆಯದ ಹುಡುಗಿಯರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಈ ಹುಡುಗಿಯರು 6 ನೇ ತರಗತಿ ಅಥವಾ 7 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಶನಿವಾರ ಪೊಲೀಸರು ಸೆಕ್ಷನ್ 137(2) ಅಡಿಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದಾರೆ.
ಸರ್ಕಾರಿ ಶಾಲೆಗೆಂದು ಶುಕ್ರವಾರ ಮನೆಯಿಂದ ಹೋದ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 13 ವರ್ಷದ ಮಗಳು ಇನ್ನೂ ಮನೆಗೆ ವಾಪಾಸ್ಸಾಗಿಲ್ಲ ಎಂದು ಪೊಲೀಸರನ್ನು ಸಂಪರ್ಕಿಸಿದ ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದಾರೆ. ಅದೇ ಶಾಲೆಯ 13 ವರ್ಷ ವಯಸ್ಸಿನ ಮತ್ತು 6 ನೇ ತರಗತಿಯ ವಿದ್ಯಾರ್ಥಿಗಳಾದ ಮತ್ತಿಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ. ಅಲ್ಲದೇ 7 ನೇ ತರಗತಿಯ ಇನ್ನೊಬ್ಬ ಬಾಲಕಿ ಕೂಡ ಶಾಲೆಗೆ ಹೋದ ನಂತರ ನಾಪತ್ತೆಯಾಗಿದ್ದಾರೆ.
ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ನರ್ಹಿ ಪೊಲೀಸ್ ಠಾಣೆ ಎಸ್‌ಎಚ್‌ಒ ವೀರೇಂದ್ರ ಸಿಂಗ್ ತಿಳಿಸಿದ್ದಾರೆ.