ಚೆನ್ನೈ: ಶ್ರೀಲಂಕಾದ ತಮಿಳರ ಸಮಸ್ಯೆ ಬಗ್ಗೆ ಮಾತನಾಡುವ ವೇಳೆ ನಟ ಹಾಗೂ ತಮಿಳಗ ವೆಟ್ರಿ ಕಳಗಂ (TVK)ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ ವಿವಾದಿತ ಹೇಳಿಕೆಯೊಂದನ್ನು ನೀಡಿದ್ದಾರೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಯ ಮಾಸ್ಟರ್ ಮೈಂಡ್ ಆಗಿದ್ದ ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಂ (LTTE) ಮುಖ್ಯಸ್ಥರಾಗಿದ್ದ ದಿವಂಗತ ವೇಲುಪಿಳ್ಳೈ ಪ್ರಭಾಕರನ್ ಅವರನ್ನು ಹಾಡಿ ಹೊಗಳಿದ್ದಾರೆ. ಶ್ರೀಲಂಕಾ ದೇಶದಲ್ಲಿ ವಾಸಿಸುತ್ತಿರುವ ತಮಿಳುಗರ ಪರ ಧ್ವನಿ ಎತ್ತಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ಎಲ್‌ಟಿಟಿಇ ( ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ) ಎಂಬುದು ಶ್ರೀಲಂಕಾದಲ್ಲಿ ತಮಿಳು ಅಲ್ಪಸಂಖ್ಯಾತರಿಗಾಗಿ ಒಂದು ಪ್ರತ್ಯೇಕ ರಾಜ್ಯವನ್ನು ಸ್ಥಾಪಿಸಲು ಹೋರಾಡಿದ ಒಂದು ತಮಿಳು ಉಗ್ರಗಾಮಿ ಸಂಘಟನೆಯಾಗಿತ್ತು
ಅಂತರ್ಯುದ್ಧದ ಸಮಯದಲ್ಲಿ ನೆರೆಯ ದೇಶದಿಂದ ಭಾರತಕ್ಕೆ ಪಲಾಯನ ಮಾಡಿದ ಅನೇಕ ಶ್ರೀಲಂಕದ ತಮಿಳುಗರು ನಿರಾಶ್ರಿತರಾಗಿದ್ದಾರೆ. 1990 ರ ದಶಕದಿಂದ ಭಾರತದಲ್ಲಿ ನಿಷೇಧಿಸಲ್ಪಟ್ಟ ಎಲ್‌ಟಿಟಿಇ ಶ್ರೀಲಂಕಾದ ಉತ್ತರ ಮತ್ತು ಪೂರ್ವ ಪ್ರಾಂತ್ಯಗಳಲ್ಲಿ ಆಳ್ವಿಕೆ ನಡೆಸಿದ ಸಶಸ್ತ್ರ ಪಡೆ. ಇದು 2009 ರಲ್ಲಿ ಶ್ರೀಲಂಕಾ ರಾಜ್ಯಕ್ಕೆ ಸೋಲುವವರೆಗೂ ಸ್ವತಂತ್ರ ತಮಿಳು ರಾಜ್ಯ ಸ್ಥಾಪಿಸಲು ದಶಕಗಳ ಕಾಲ ಹೋರಾಡಿತು. ಅದೇ ವರ್ಷ ಶ್ರೀಲಂಕಾ ಸೇನೆಯಿಂದ ಪ್ರಭಾಕರನ್ ಹತ್ಯೆಯಾಗಿತ್ತು.
2026ರ ವಿಧಾನಸಭಾ ಚುನಾವಣೆಯ ಭಾಗವಾಗಿ ತಮಿಳುನಾಡಿನ ನಾಗಪಟ್ಟಣಂನಲ್ಲಿ ನಡೆದ ಸಮಾವೇಶದಲ್ಲಿ ಶ್ರೀಲಂಕಾದ ತಮಿಳರನ್ನು ಉದ್ದೇಶಿಸಿ ಮಾತನಾಡಿದ ವಿಜಯ್, ವೇಲುಪಿಳ್ಳೈ ಪ್ರಭಾಕರನ್ ʻಈಳಂʼ ತಮಿಳರ ಸಮುದಾಯಕ್ಕೆ ತಾಯಿಯಂತೆ. ಹಾಗಾಗಿ ಲಂಕಾ ತಮಿಳರ ಸಮಸ್ಯೆ ತಮಿಳುನಾಡಿನಲ್ಲಿ ಅದ್ರಲ್ಲೂ ನಾಗಪಟ್ಟಣಂನಂತಹ ಪ್ರದೇಶಗಳ ಮೀನುಗಾರರಲ್ಲಿ ಭಾವನಾತ್ಮಕವಾಗಿದೆ ಎಂದಿದ್ದಾರೆ. ʻಈಳಂʼ ಎನ್ನುವುದು ಶ್ರೀಲಂಕಾದ ಆ ಪ್ರದೇಶವನ್ನು ಸೂಚಿಸುವ ಹೆಸರು.
ರಾಜೀವ್ ಗಾಂಧಿ ಹತ್ಯೆ ಹಿಂದಿನ ಮಾಸ್ಟರ್?
1991 ರಲ್ಲಿ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಯ ಹಿಂದೆ ಎಲ್‌ಟಿಟಿಇ ಇದೆ ಎಂದು ಆರೋಪಿಸಲಾಗಿದೆ. 1991ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಆಯೋಜಿಸಿದ್ದ ಬಹಿರಂಗ ಸಮಾವೇಶದಲ್ಲಿ ಎಲ್‌ಟಿಟಿಇ ಮಹಿಳಾ ಆತ್ಮಾಹುತಿ ಬಾಂಬರ್ ರಾಜೀವ್ ಗಾಂಧಿಯನ್ನು ಹತ್ಯೆಗೈದಿದ್ದರು. ಇದಕ್ಕೆ ಪ್ರಭಾಕರನ್ ಆದೇಶಿಸಿದ್ದಾರೆ ಎಂದು ಹೇಳಲಾಗಿತ್ತು.