ನಾರಾಯಣಪುರ (ಛತ್ತೀಸಗಢ): ಛತ್ತೀಸಗಢದ ನಾರಾಯಣಪುರ ಜಿಲ್ಲೆಯಲ್ಲಿ ಸೋಮವಾರ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎನ್‌ಕೌಂಟರ್ ಸ್ಥಳದಿಂದ ಭಾರಿ ಪ್ರಮಾಣದ ಸ್ಫೋಟಕ ವಸ್ತುಗಳು ಮತ್ತು ಕೆಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಮಹಾರಾಷ್ಟ್ರದ ಪಕ್ಕದ ಅಭುಜ್‌ಮಾದ್‌ನ ಅರಣ್ಯದಲ್ಲಿ ಬೆಳಿಗ್ಗೆ ಭದ್ರತಾ ಪಡೆಗಳ ತಂಡವೊಂದು ಶೋಧ ಕಾರ್ಯಾಚರಣೆಗೆ ಹೊರಟಿದ್ದಾಗ ಗುಂಡಿನ ಚಕಮಕಿ ನಡೆಯಿತು. ಈ ಪ್ರದೇಶದಲ್ಲಿ ನಕ್ಸಲರ ಉಪಸ್ಥಿತಿಯ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಇಲ್ಲಿನ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಇಲ್ಲಿಯವರೆಗೆ, ಇಬ್ಬರು ನಕ್ಸಲರ ಮೃತದೇಹಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ಆ ಪ್ರದೇಶದಲ್ಲಿ ಇನ್ನೂ ನಿರಂತರ ಗುಂಡಿನ ಚಕಮಕಿ ಮತ್ತು ಶೋಧ ಕಾರ್ಯಾಚರಣೆ ನಡೆಯುತ್ತಿದೆ' ಎಂದು ಅವರು ಹೇಳಿದರು.
ಎನ್‌ಕೌಂಟರ್ ಸ್ಥಳದಿಂದ ಎಕೆ -47 ರೈಫಲ್, ಇತರ ಶಸ್ತ್ರಾಸ್ತ್ರಗಳು, ದೊಡ್ಡ ಪ್ರಮಾಣದ ಸ್ಫೋಟಕ ವಸ್ತುಗಳು, ಮಾವೋವಾದಿ ಸಾಹಿತ್ಯ, ಪ್ರಚಾರ ಸಾಮಗ್ರಿಗಳು ಮತ್ತು ದಿನ ಬಳಕೆಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ವರ್ಷ ಇಲ್ಲಿಯವರೆಗೆ ಛತ್ತೀಸಗಢದಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ 249 ನಕ್ಸಲರು ಹತ್ಯೆಯಾಗಿದ್ದಾರೆ. ಅವರಲ್ಲಿ 220 ಜನರನ್ನು ಏಳು ಜಿಲ್ಲೆಗಳನ್ನು ಒಳಗೊಂಡಿರುವ ಬಸ್ತಾರ್ ವಿಭಾಗದಲ್ಲಿ ಹತ್ಯೆ ಮಾಡಲಾಗಿದ್ದು, 27 ಜನರನ್ನು ರಾಯ್‌ಪುರ ವಿಭಾಗಕ್ಕೆ ಸೇರುವ ಗರಿಯಾಬಂದ್ ಜಿಲ್ಲೆಯಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ.
ದುರ್ಗ್ ವಿಭಾಗದ ಮೊಹ್ಲಾ-ಮನ್‌ಪುರ್-ಅಂಬಾಘರ್ ಚೌಕಿ ಜಿಲ್ಲೆಯಲ್ಲಿ ಇತರ ಇಬ್ಬರು ನಕ್ಸಲರು ಮೃತಪಟ್ಟಿದ್ದಾರೆ.