ನವದೆಹಲಿ: ಇತ್ತೀಚಿನ ಸೌದಿ-ಪಾಕಿಸ್ತಾನ ನಡುವಣ ಸಂಬಂಧದ ಬಗ್ಗೆ ಕಾಂಗ್ರೆಸ್ ಕಿಡಿಕಾರುತ್ತಿದ್ದರೆ, ಆ ಪಕ್ಷದ ಸಂಸದರಾಗಿರುವ ಶಶಿ ತರೂರ್ ಮತ್ತೆ ಭಿನ್ನ ಹೇಳಿಕೆ ನೀಡಿದ್ದಾರೆ.
ಇತ್ತೀಚಿನ ಸೌದಿ ಅರೇಬಿಯಾ-ಪಾಕಿಸ್ತಾನ ಪರಸ್ಪರ ರಕ್ಷಣಾ ಒಪ್ಪಂದಕ್ಕೆ ಭಾರತವು ಅತಿಯಾಗಿ ಪ್ರತಿಕ್ರಿಯಿಸಬಾರದು ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ಸಂಸದ ಶಶಿ ತರೂರ್ ಮಂಗಳವಾರ ಹೇಳಿದ್ದಾರೆ. ಇದು ಉಭಯ ರಾಷ್ಟ್ರಗಳ ನಡುವಿನ ದೀರ್ಘಕಾಲದ ಸಂಬಂಧದ ಔಪಚಾರಿಕತೆ ಎಂದಿದ್ದಾರೆ.
ಸೌದಿ ಅರೇಬಿಯಾ ಮತ್ತು ಪಾಕಿಸ್ತಾನದ ನಡುವಿನ ರಕ್ಷಣಾ ಒಪ್ಪಂದವನ್ನು ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ರಾಜತಾಂತ್ರಿಕತೆಗೆ ಆದ ಮತ್ತೊಂದು ಹಿನ್ನಡೆಯಾಗಿದ್ದು, ಈ ಒಪ್ಪಂದ ಭಾರತದ ರಾಷ್ಟ್ರೀಯ ಭದ್ರತೆಗೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದು ಇತ್ತೀಚಿಗೆ ಕಾಂಗ್ರೆಸ್ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಕಳವಳ ವ್ಯಕ್ತಪಡಿಸಿದ್ದರು.
ಈ ಕುರಿತು ಸುದ್ದಿಸಂಸ್ಥೆ ANIಗೆ ಸಂದರ್ಶನ ನೀಡಿದ ಶಶಿ ತರೂರ್, ಸಮತೋಲಿತ ದೃಷ್ಟಿಕೋನದ ಅಗತ್ಯವನ್ನು ಒತ್ತಿ ಹೇಳಿದರು, ಕೇವಲ ಭಾರತದ ಹಿತಾಸಕ್ತಿಗಳ ಮೂಲಕ ಅಂತಾರಾಷ್ಟ್ರೀಯ ಬೆಳವಣಿಗೆಗಳನ್ನು ನೋಡದಂತೆ ಎಚ್ಚರಿಕೆ ನೀಡಿದರು.
"ಇದು ದೀರ್ಘಕಾಲದ ಸಂಬಂಧದ ಔಪಚಾರಿಕತೆಯಾಗಿದೆ ಎಂಬುದನ್ನು ಮರೆಯಬೇಡಿ. ಒಂದು ಕಾಲದಲ್ಲಿ ಸೌದಿ ಅರೇಬಿಯಾದಲ್ಲಿ 20,000 ಪಾಕಿಸ್ತಾನಿ ಸೈನಿಕರು ನೆಲೆಸಿದ್ದರು. ಪಾಕಿಸ್ತಾನವು ತನ್ನನ್ನು ಮುಸ್ಲಿಂ ಪ್ರಪಂಚದ ಕಾನೂನು ಜಾರಿಯಲ್ಲಿನ ಒಂದು ಅಂಗವೆಂದು ಬಿಂಬಿಸಿಕೊಳ್ಳಲು ಬಹಳ ಹಿಂದಿನಿಂದಲೂ ಪ್ರಯತ್ನಿಸುತ್ತಿದೆ. ಈ ಮಧ್ಯೆ ಉಭಯ ರಾಷ್ಟ್ರಗಳ ನಡುವಿನ ಒಪ್ಪಂದ ಕೇವಲ ಔಪಚಾರಿಕವಾದದ್ದು ಎಂದಿದ್ದಾರೆ.
ನನಗೆ ಬಾಂಬ್ ತಯಾರಿಸುವ ಅಗತ್ಯವಿಲ್ಲ. ನನಗೆ ಬೇಕಾದರೆ ಪಾಕಿಸ್ತಾನದಿಂದ ಒಂದನ್ನು ಕೊಳ್ಳುತ್ತೇನೆ ಎಂಬ ಸೌದಿ ರಾಜಕುಮಾರನ ಹೇಳಿಕೆ ಕುರಿತು ಮಾತನಾಡಿದ ತರೂರ್, ಅಂತಹ ಸಂಬಂಧ ಈಗಾಗಲೇ ಜಗತ್ತಿಗೆ ಚೆನ್ನಾಗಿ ತಿಳಿದಿದೆ. ನಾವು ಅತಿಯಾಗಿ ಪ್ರತಿಕ್ರಿಯಿಸಬೇಕು ಎಂದು ನಾನು ಭಾವಿಸುವುದಿಲ್ಲ. ಗಲ್ಫ್ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧ ಸದೃಢವಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.