ಮುಂಬೈ: ಪ್ರಧಾನಿ ನರೇಂದ್ರ ಮೋದಿಯವರ ಮಾರ್ಫ್ ಮಾಡಿದ ಛಾಯಾಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಕ್ಕೆ ಆಕ್ರೋಶಗೊಂಡ ಮುಂಬೈ ನ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರೊಬ್ಬರಿಗೆ ಸಾರ್ವಜನಿಕವಾಗಿ ಸೀರೆ ಉಡಿಸಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮಂಗಳವಾರ ಸ್ಥಳೀಯ ಬಿಜೆಪಿ ಪದಾಧಿಕಾರಿಯೊಬ್ಬರು ಈ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಇದು ಪ್ರಧಾನಿಯನ್ನು "ಅಪಮಾನಗೊಳಿಸಲು" ಕಾಂಗ್ರೆಸ್ ಕಾರ್ಯಕರ್ತ ಮಾಮಾ ಅಲಿಯಾಸ್ ಪ್ರಕಾಶ್ ಪಗಾರೆ ಮಾಡಿದ ಪ್ರಯತ್ನಕ್ಕೆ ಪ್ರತಿಕ್ರಿಯೆಯಾಗಿದೆ ಎಂದು ಹೇಳಿದ್ದಾರೆ.
ಘಟನೆಯ ವೀಡಿಯೊ ತುಣುಕು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಮಂಗಳವಾರ ಈ ಕೃತ್ಯದಲ್ಲಿ ಭಾಗಿಯಾಗಿರುವ ಬಿಜೆಪಿ ಕಾರ್ಯಕರ್ತರ ವಿರುದ್ಧ ಕಾನೂನು ಕ್ರಮದ ಮೊರೆ ಹೋಗುವುದಾಗಿ ಪಗಾರೆ ಹೇಳಿದ್ದಾರೆ.
72 ವರ್ಷದ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತ ಪ್ರಧಾನಿಯ ಮಾರ್ಫ್ ಮಾಡಿದ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಈ ಬೆನ್ನಲ್ಲೇ ಬಿಜೆಪಿ ಕಲ್ಯಾಣ್ ಅಧ್ಯಕ್ಷ ನಂದು ಪರಬ್ ಮತ್ತು ಇತರ ಪಕ್ಷದ ಕಾರ್ಯಕರ್ತರು ಡೊಮಿಬ್ವ್ಲಿ ಪ್ರದೇಶದ ಮನ್ಪಾಡಾ ರಸ್ತೆಯಲ್ಲಿ ಪಗಾರೆ ಅವರನ್ನು ತಡೆದರು. ಅವರು ರಸ್ತೆಯ ಮಧ್ಯದಲ್ಲಿ ಬಲವಂತವಾಗಿ ಸೀರೆಯನ್ನು ಉಡಿಸಲು ಮುಂದಾದರು.
ಕೃತ್ಯವನ್ನು ಸಮರ್ಥಿಸಿಕೊಂಡ ಪರಬ್, ಪ್ರಧಾನಿಯನ್ನು "ಅಪಮಾನಗೊಳಿಸಲು" ಪಗಾರೆ ಮಾಡಿದ ಪ್ರಯತ್ನಕ್ಕೆ ಇದು ಅವರ ಪ್ರತಿಕ್ರಿಯೆ ಎಂದು ಹೇಳಿದ್ದಾರೆ. "ನಾವು ಮಾಮಾ ಪಗರೆ ಅವರನ್ನು ಬೀದಿಯಲ್ಲಿ ದುಬಾರಿ ಸೀರೆ ಉಡುವಂತೆ ಮಾಡಿದೆವು" ಎಂದು ಪರಬ್ ಹೇಳಿದ್ದಾರೆ.
ಇದಷ್ಟೇ ಅಲ್ಲದೇ ಪಗರೆ ಬಿಜೆಪಿ ಕಾರ್ಯಕರ್ತರ ವಿರುದ್ಧ ಜಾತಿ ನಿಂದನೆಯ ಆರೋಪವನ್ನೂ ಮಾಡಿದ್ದು, ಘರ್ಷಣೆಯ ಸಮಯದಲ್ಲಿ ಕಪಾಳಮೋಕ್ಷ ಮಾಡಿದ್ದಾರೆಂದೂ ಆರೋಪಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್‍ತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ದೂರು ನೀಡುವುದಾಗಿ ಹೇಳಿದ್ದಾರೆ. "ಗುಂಪು ಮನಸ್ಥಿತಿ" ಮತ್ತು ಅವರ ವೈಯಕ್ತಿಕ ಸ್ವಾತಂತ್ರ್ಯದ ಮೇಲಿನ ಅತಿಕ್ರಮಣವನ್ನು ಸಹಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
ಕಲ್ಯಾಣ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೋಟೆ ಈ ಘಟನೆಯನ್ನು ಖಂಡಿಸಿದ್ದಾರೆ. ಬಿಜೆಪಿ ಕಾರ್ಯಕರ್ತರ ಕ್ರಮವು "ಇಡೀ ಮಹಿಳಾ ವರ್ಗಕ್ಕೆ ಅವಮಾನ" ಮತ್ತು ಹಿರಿಯ ನಾಯಕನ ಮೇಲೆ ಅನಾಗರಿಕ ದಾಳಿಯಾಗಿದೆ ಎಂದು ಹೇಳಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೋಟೆ ಒತ್ತಾಯಿಸಿದರು.