ರಾಂಚಿ: ಗುಮ್ಲಾ ಜಿಲ್ಲೆಯಲ್ಲಿ ನಕ್ಸಲರು ಮತ್ತು ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ನಿಷೇಧಿತ ಮಾವೋವಾದಿ ವಿಭಜಿತ ಗುಂಪಿನ ಕನಿಷ್ಠ ಮೂವರು ನಕ್ಸಲರು ಭದ್ರತಾ ಪಡೆಯ ಗುಂಡಿಗೆ ಬಲಿಯಾಗಿದ್ದಾರೆ.
ಜಾರ್ಖಂಡ್ ಜಾಗ್ವರ್ ಮತ್ತು ಗುಮ್ಲಾ ಪೊಲೀಸರನ್ನೊಳಗೊಂಡ ಭದ್ರತಾ ಪಡೆ ಜಾರ್ಖಂಡ್ ಜನ್ ಮುಕ್ತಿ ಪರಿಷದ್ (ಜೆಜೆಎಂಪಿ) ಮಾವೋ ಗುಂಪಿನ ಸದಸ್ಯರು ಇರುವಿಕೆ ಕುರಿತು ಮಾಹಿತಿ ಪಡೆದಿದ್ದಾರೆ. ಇಂದು ಬೆಳಗ್ಗೆ 8ಕ್ಕೆ ಬಿಷ್ಣುಪುರ್ ಪೊಲೀಸ್ ಠಾಣೆಯ ವ್ಯಾಪಿಯಡಿ ಬರುವ ಕೆಚಕಿ ಗ್ರಾಮದ ಅರಣ್ಯದೊಳಗೆ ಶೋಧ ನಡೆಸಿದ್ದಾರೆ.
ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಹತರಾಗಿದ್ದಾರೆ. ಮೃತಪಟ್ಟ ನಕ್ಸಲರನ್ನು ಲೋಹರ್ದಗಾ ಜಿಲ್ಲೆಯ ನಿವಾಸಿಗಳಾದ ಲಾಲು ಲೋಹ್ರಾ, ಸುಜಿತ್ ಒರಾನ್ ಮತ್ತು ಲತೇಹಾರ್ ಮೂಲದ ಚೋಟು ಒರಾನ್ ಎಂದು ಗುರುತಿಸಲಾಗಿದೆ ಎಂದು ಗುಮ್ಲಾ ಎಸ್ಪಿ ಹ್ಯಾರಿಸ್ ಬಿನ್ ಜಮಾನ್ ಮಾಹಿತಿ ನೀಡಿದ್ದಾರೆ.
ಭದ್ರತಾ ಪಡೆ ಕಂಡೊಡನೆ ಜೆಜೆಎಂಪಿ ಮಾವೋಗಳು ಗುಂಡಿನ ದಾಳಿ ನಡೆಸಿದ್ದು, ಅದಕ್ಕೆ ಪ್ರತಿಯಾಗಿ ಭದ್ರತಾ ಪಡೆ ಕೂಡ ದಾಳಿ ಮಾಡಿತು. ಸ್ಥಳದಲ್ಲಿದ್ದ ಮೂರು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಾರ್ಖಂಡ್ ಪೊಲೀಸ್ ವಕ್ತಾರ ಹಾಗೂ ಐಜಿ ಮೈಕಲ್ ರಾಜ್ ಎಸ್ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಇನ್ನು ಕೂಡ ಕಾರ್ಯಾಚರಣೆ ಮುಂದುವರೆದಿದೆ.