ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ "ತುಂಬಾ, ತುಂಬಾ ಸಕಾರಾತ್ಮಕ" ಸಂಬಂಧವನ್ನು ಹೊಂದಿದ್ದಾರೆ ಮತ್ತು ಅವರು ಶೀಘ್ರವೆ ಭೇಟಿಯಾಗುತ್ತಾರೆ ಎಂದು ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ವರ್ಷದ ಕೊನೆಯಲ್ಲಿ ಅಥವಾ 2026 ರ ಆರಂಭದಲ್ಲಿ ನಡೆಯಲಿರುವ ಮುಂದಿನ ಕ್ವಾಡ್ ಶೃಂಗಸಭೆಗೆ ಯೋಜನೆ ನಡೆಯುತ್ತಿದೆ ಎಂದು ಅಧಿಕಾರಿ ಒತ್ತಿ ಹೇಳಿದ್ದಾರೆ.
ಭಾರತ ಕ್ವಾಡ್ ಶೃಂಗಸಭೆಗಾಗಿ ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್‌ನ ನಾಯಕರನ್ನು ಆಹ್ವಾನಿಸಿದೆ. 2024ರ ಶೃಂಗಸಭೆಯು ಯುಎಸ್‌ನಲ್ಲಿ ಡೆಲವೇರ್‌ನ ವಿಲ್ಮಿಂಗ್ಟನ್‌ನಲ್ಲಿ ನಡೆಯಿತು.
"ಶೀಘ್ರದಲ್ಲೇ ಬರಲಿರುವ ಸಭೆಗಳ ವಿಷಯದಲ್ಲಿ, ನಾನು ಖಂಡಿತವಾಗಿಯೂ ಅಧ್ಯಕ್ಷರ ಪರವಾಗಿ ಏನನ್ನೂ ಘೋಷಿಸಲು ಬಯಸುವುದಿಲ್ಲ, ಆದರೆ ನೀವು ಇಬ್ಬರೂ (ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್) ಭೇಟಿಯಾಗುವುದನ್ನು ನೋಡುತ್ತೀರಿ ಎಂದು ನನಗೆ ಖಚಿತವಾಗಿದೆ" ಎಂದು ವಿದೇಶಾಂಗ ಇಲಾಖೆಯ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.
"ಟ್ರಂಪ್-ಮೋದಿ ತುಂಬಾ, ತುಂಬಾ ಸಕಾರಾತ್ಮಕ ಸಂಬಂಧವನ್ನು ಹೊಂದಿದ್ದಾರೆ. ನಮಗೆ ಕ್ವಾಡ್ ಶೃಂಗಸಭೆ ಇದೆ, ನಾವು ಯೋಜನೆ ರೂಪಿಸುವ ಕೆಲಸ ಮಾಡುತ್ತಿದ್ದೇವೆ, ಆದ್ದರಿಂದ ಒಂದು ಹಂತದಲ್ಲಿ ಅದು ಸಂಭವಿಸುತ್ತದೆ, ಈ ವರ್ಷದಲ್ಲದಿದ್ದರೆ, ಮುಂದಿನ ವರ್ಷದ ಆರಂಭದಲ್ಲಿ ನಾಯಕರು ಭೇಟಿ ಮಾಡುವ ಸಾಧ್ಯತೆ ಇದೆ. ಅದರ ದಿನಾಂಕಗಳ ಮೇಲೆ ಕೆಲಸ ಮಾಡುತ್ತಿದ್ದೇವೆ" ಎಂದು ಅಧಿಕಾರಿ ತಿಳಿಸಿದ್ದಾರೆ.
ಅಮೆರಿಕ-ಭಾರತ ನಡುವಿನ ನಡೆಯುತ್ತಿರುವ ಮಾತುಕತೆಗಳನ್ನು "ನಂಬಲಾಗದಷ್ಟು ಉತ್ಪಾದಕ" ಎಂದು ಬಣ್ಣಿಸಿರುವ ಅಧಿಕಾರಿ, ಮುಂಬರುವ ತಿಂಗಳುಗಳಲ್ಲಿ "ನಿರಂತರ ಸಕಾರಾತ್ಮಕ ಬೆಳವಣಿಗೆಗಳು" ನಿರೀಕ್ಷಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
"ನಮ್ಮಲ್ಲಿ ಭಿನ್ನಾಭಿಪ್ರಾಯಗಳಿವೆ. ಕಳೆದ ಕೆಲವು ವಾರಗಳಲ್ಲಿ ನಾವು ಕೆಲವು ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳುತ್ತಿದ್ದೇವೆ ಎಂಬುದು ಸ್ಪಷ್ಟವಾಗಿದೆ, ವಿಶೇಷವಾಗಿ ವ್ಯಾಪಾರ ಮತ್ತು ರಷ್ಯಾದ ತೈಲ ಖರೀದಿಗೆ ಸಂಬಂಧಿಸಿದಂತೆ. ನಾವು ಅವುಗಳನ್ನು ಪರಿಹರಿಸಿಕೊಳ್ಳುತ್ತಿದ್ದೇವೆ" ಎಂದು ಅಧಿಕಾರಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಟ್ರಂಪ್ ಇತ್ತೀಚೆಗೆ ಮೋದಿ ಅವರ 75 ನೇ ಹುಟ್ಟುಹಬ್ಬದಂದು ಅವರಿಗೆ ಶುಭ ಹಾರೈಸಲು ಮಾಡಿದ ದೂರವಾಣಿ ಕರೆಯನ್ನು ಸಹ ಅಧಿಕಾರಿ ಉಲ್ಲೇಖಿಸಿದರು, ಶುಭಾಶಯ ವಿನಿಮಯವನ್ನು "ನಂಬಲಾಗದಷ್ಟು ಸಕಾರಾತ್ಮಕ" ಎಂದು ಬಣ್ಣಿಸಿದ್ದಾರೆ.
ರಾಜತಾಂತ್ರಿಕ ರಂಗದಲ್ಲಿ, ಭಾರತಕ್ಕೆ ಅಮೆರಿಕದ ರಾಯಭಾರಿ ನಾಮನಿರ್ದೇಶಿತ ಮತ್ತು ದಕ್ಷಿಣ ಮತ್ತು ಮಧ್ಯ ಏಷ್ಯಾದ ವಿಶೇಷ ರಾಯಭಾರಿ ಸೆರ್ಗಿಯೊ ಗೋರ್ ಅಧ್ಯಕ್ಷರಿಗೆ ಅತ್ಯಂತ ಹತ್ತಿರದ ವ್ಯಕ್ತಿಗಳಲ್ಲಿ ಒಬ್ಬರು ಎಂದು ಅಧಿಕಾರಿ ಹೇಳಿದ್ದಾರೆ.
"ಅವರನ್ನು ಶೀಘ್ರವಾಗಿ ಅಧಿಕೃತ ನೇಮಕ ಮಾಡಲಾಗುತ್ತದೆ. ಮತ್ತು ನವದೆಹಲಿಯಲ್ಲಿ ಅವರು ಅಮೆರಿಕದ ಪ್ರತಿನಿಧಿಯಾಗಿರುತ್ತಾರೆ. ಅಧ್ಯಕ್ಷರು ಈ (ಅಮೆರಿಕ-ಭಾರತ ಸಂಬಂಧ)ದ ಮೇಲೆ ನೀಡುವ ಪ್ರಾಮುಖ್ಯತೆಯನ್ನು ಇದು ತೋರಿಸುತ್ತದೆ" ಎಂದು ಅಧಿಕಾರಿ ಹೇಳಿದರು.
80 ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದ ಸಂದರ್ಭದಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರ ಮೊದಲ ಸಭೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಜೊತೆಗಿತ್ತು ಎಂದು ಅಧಿಕಾರಿ ವಿವರಿಸಿದ್ದಾರೆ. ಸೋಮವಾರ ನಡೆದ ಒಂದು ಗಂಟೆಯ ಸಭೆ "ನಿರೀಕ್ಷೆಗೂ ಮೀರಿದ ಉತ್ಪಾದಕ ಸಭೆಯಾಗಿತ್ತು" ಎಂದು ವಿವರಿಸಿದ ಅಧಿಕಾರಿ, ಮಾತುಕತೆಗಳು ವ್ಯಾಪಾರ, ರಕ್ಷಣೆ ಮತ್ತು ತಂತ್ರಜ್ಞಾನ ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳನ್ನು ಒಳಗೊಂಡಿವೆ ಎಂದು ಹೇಳಿದರು.