ನವದೆಹಲಿ: ಲಡಾಖ್ ಘರ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ (Sonam Wangchuk) ಅವರನ್ನು ಪ್ರಚೋದನಕಾರಿ ಹೇಳಿಕೆಗಳೊಂದಿಗೆ ಜನಸಮೂಹವನ್ನು ಪ್ರಚೋದಿಸಿದ ಆರೋಪಗಳ ಹಿನ್ನೆಲೆ ಬಂಧಿಸಲಾಗಿದೆ.
ಪ್ರಚೋದನಕಾರಿ ಹೇಳಿಕೆಗಳ ಕಾರಣದಿಂದ ನನ್ನನ್ನು ಯಾವುದೇ ಸಮಯದಲ್ಲಿ ಬಂಧಿಸಲ್ಪಟ್ಟರೆ ಸಂತೋಷವಾಗುತ್ತದೆ" ಎಂದು ಅವರು ಹೇಳಿದ ಒಂದು ದಿನದ ನಂತರ ಅವರನ್ನು ಬಂಧಿಸಲಾಗಿದೆ.
ವಾಂಗ್‌ಚುಕ್ ಅವರ ಲಾಭರಹಿತ 'ಲಡಾಖ್‌ನ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಳುವಳಿ' (SECMOL) ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ ಅಥವಾ FCRA, 2010 ರ ಅಡಿಯಲ್ಲಿ ವಿದೇಶದಿಂದ ಹಣವನ್ನು ಪಡೆಯುವ ನೋಂದಣಿಯನ್ನು ಗೃಹ ಸಚಿವಾಲಯ (MHA) ರದ್ದುಗೊಳಿಸಿತ್ತು. ಈ ಬೆನ್ನಲ್ಲೇ ವಾಂಗ್ ಚುಕ್ ಅವರನ್ನೂ ಬಂಧಿಸಲಾಗಿದೆ.
ಲಡಾಖ್ ನಲ್ಲಿ ನಡೆಯುತ್ತಿರುವ ಘರ್ಷಣೆಯಲ್ಲಿ 2018 ರಲ್ಲಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಗೆದ್ದ ಪರ್ವತ ಪ್ರದೇಶದ ಕಾರ್ಯಕರ್ತ ವಾಂಗ್ ಚುಕ್ ಮುಂಚೂಣಿಯಲ್ಲಿದ್ದು, ಎರಡು ದಿನಗಳ ಹಿಂದೆ ನಾಲ್ವರು ಸಾವನ್ನಪ್ಪಿದ ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹಿಂಸಾಚಾರದ ನಂತರ ಕೇಂದ್ರ ಮತ್ತು ಕೇಂದ್ರಾಡಳಿತ ಪ್ರದೇಶದ ಆಡಳಿತವು ಮಾಡಿದ ಎಲ್ಲಾ ಆರೋಪಗಳನ್ನು ವಾಂಗ್ ಚುಕ್ ನಿರಾಕರಿಸಿದ್ದಾರೆ.
ಗುರುವಾರ ಮಾಧ್ಯಮಗಳಿಗೆ ಕೇಂದ್ರದ ಆರೋಪಗಳ ಕುರಿತು ಸ್ಪಷ್ಟನೆ ನೀಡಿದ್ದ, ವಾಂಗ್ ಚುಕ್, ತಮ್ಮ ಲಾಭರಹಿತ ಸಂಸ್ಥೆ ವಿದೇಶಿ ಕೊಡುಗೆಗಳನ್ನು ಪಡೆದಿಲ್ಲ, ಆದರೆ UN, ಸ್ವಿಸ್ ಮತ್ತು ಇಟಾಲಿಯನ್ ಸಂಸ್ಥೆಗಳೊಂದಿಗೆ ವ್ಯವಹಾರ ವಹಿವಾಟುಗಳನ್ನು ನಡೆಸಿದೆ ಮತ್ತು ಎಲ್ಲಾ ತೆರಿಗೆಗಳನ್ನು ಪಾವತಿಸಿದೆ ಎಂದು ಹೇಳಿದ್ದಾರೆ.
"... ಅವರು ವ್ಯವಹಾರವನ್ನು ವಿದೇಶಿ ಕೊಡುಗೆಗಳೆಂದು ತಪ್ಪಾಗಿ ಭಾವಿಸಿದ್ದಾರೆ. ಅದು ಅವರ [ಕೇಂದ್ರದ] ತಪ್ಪೆಂದು ನಾನು ಪರಿಗಣಿಸುತ್ತೇನೆ ಮತ್ತು ಆದ್ದರಿಂದ ನನಗೆ ಅದರ ಬಗ್ಗೆ ಯಾವುದೇ ಅಭ್ಯಂತರವಿಲ್ಲ. ಆದರೆ ಅದು ವಿದೇಶಿ ಕೊಡುಗೆ ಎಂದು ಭಾವಿಸಿದ್ದಾರೆ. ಅದು ವಿದೇಶಿ ಕೊಡುಗೆಯಲ್ಲ," ಎಂದು ಅವರು ಗುರುವಾರ NDTVಗೆ ಹೇಳಿಕೆ ನೀಡಿದ್ದಾರೆ.
2019 ರಲ್ಲಿ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370 ನೇ ವಿಧಿಯ ಅಡಿಯಲ್ಲಿ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಲಡಾಖ್ ಕೇಂದ್ರಾಡಳಿತ ಪ್ರದೇಶವಾಗುವುದಕ್ಕೆ ವ್ಯಕ್ತವಾಗಿದ್ದ ಹರ್ಷೋದ್ಗಾರ ಕ್ರಮೇಣ ಬದಲಾವಣೆಯಾಗಿದ್ದು, ರಾಜ್ಯ ಸ್ಥಾನಮಾನದ ಬೇಡಿಕೆಯಿಂದಾಗಿ ಪ್ರಸ್ತುತ ಉದ್ವಿಗ್ನತೆ ಉಂಟಾಗಿದೆ, ಇದು ಬಿಕ್ಕಟ್ಟನ್ನು ರೂಪಿಸುವಲ್ಲಿ ವಿದೇಶಿ ಕೈಗಳು ಮತ್ತು ಸ್ಥಳೀಯ ಹಿತಾಸಕ್ತಿಗಳು ಭಾಗಿಯಾಗಿರಬಹುದು ಎಂಬ ಊಹಾಪೋಹಕ್ಕೆ ಕಾರಣವಾಗಿದೆ.