ನವದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಆರ್‌ಪಿಎಫ್ ಅಧಿಕಾರಿಯಂತೆ ಕಾಣಿಸಿಕೊಂಡ ವ್ಯಕ್ತಿಯೊಬ್ಬ ರಹಸ್ಯವಾಗಿ ತನ್ನ ಫೋಟೋಗಳನ್ನು ತೆಗೆದಿದ್ದಾನೆ ಎಂದು ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ. ಆಕೆ ಸ್ಥಳದಲ್ಲಿಯೇ ಆತನಿಗೆ ಚಳಿ ಬಿಡಿಸಿರುವ ವಿಡಿಯೋ ವೈರಲ್ ಆಗಿದೆ.
ಈ ಕುರಿತ ವಿಡಿಯೋವನ್ನು ಆಯೇಶಾ ಖಾನ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅದು ಈಗ ಒಂದು ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಕಂಡಿದೆ.
“ಸೆಪ್ಟೆಂಬರ್ 16 ರ ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಈ ಅನುಭವವಾಯಿತು. ಫೋನ್ ಕಾಲ್ ನಲ್ಲಿ ಇರುವಂತೆ ಕಂಡುಬಂದ ವ್ಯಕ್ತಿಯೊಬ್ಬ ರಹಸ್ಯವಾಗಿ ನನ್ನ ಫೋಟೋಗಳನ್ನು ತೆಗೆಯುತ್ತಲೇ ಇದ್ದನು. ನಂತರ ಆತನನ್ನು ಪ್ರಶ್ನಿಸಿದಾಗ ಅದನ್ನು ನಿರಾಕರಿಸಿದ. ಆತನ ಫೋನ್ ನೋಡಬೇಕು ಎಂದು ನಾನು ಕೇಳಿದಾಗ ಆತನ ಫೋನ್ ನಲ್ಲಿ ಫೋಟೋಗಳಿದ್ದವು. ನನ್ನ ಕಾಲುಗಳ ಪೋಟೋಗಳನ್ನು ತೆಗೆದಿದ್ದ ಎಂದು ಅವರು ಬರೆದುಕೊಂಡಿದ್ದಾರೆ.
ಆ ವ್ಯಕ್ತಿ ಸಿಆರ್‌ಪಿಎಫ್‌ಗೆ ಸೇರಿದವನಾಗಿರುವುದು ಅಸಮಾಧಾನ ಮೂಡಿಸಿದೆ. ಅವರು ನಮ್ಮ ಸುರಕ್ಷತೆಗಾಗಿ ಇರುವವರು. ಒಬ್ಬ ಮಹಿಳೆ ವಿಮಾನ ನಿಲ್ದಾಣದೊಳಗೆ ಸುರಕ್ಷಿತವಾಗಿಲ್ಲ ಅಂದ್ರೆ ಮತ್ತೇ ಎಲ್ಲಿ ಸುರಕ್ಷಿತವಾಗಿರಬೇಕು?" ಎಂದು ಖಾನ್ ಪ್ರಶ್ನಿಸಿದ್ದಾರೆ. ಖಾನ್ ಪ್ರಶ್ನಿಸುತ್ತಿದ್ದಂತೆಯೇ ಆತ ಫೋಟೋಗಳನ್ನು ಡಿಲೀಟ್ ಮಾಡಿರುವುದು ಕಂಡುಬಂದಿದೆ.
ಈ ಬಗ್ಗೆ ಕೇಳಿದಾಗ, ಸ್ವಯಂ ಚಾಲಿತವಾಗಿ ಫೋಟೋ ತೆಗೆಯಲಾಗಿದ್ದು, ಡಿಲೀಟ್ ಮಾಡಿರುವುದಾಗಿ ಹೇಳಿದ್ದಾನೆ. ಭಾರತದಲ್ಲಿ ಮಹಿಳೆಯರು ಸುರಕ್ಷತೆ ಎಂಬುದು 'ಭಯಾನಕ ಜೋಕ್' ಎಂದು ಖಾನ್ ತನ್ನ ಫೋಸ್ಟ್ ಮುಕ್ತಾಯಗೊಳಿಸಿದ್ದಾರೆ.