ನವದೆಹಲಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಯವರ ಎದೆಗೆ ಗುಂಡು ಹೊಡೆಯುತ್ತೇವೆಂದು ಹೇಳುವ ಮೂಲಕ ಕೊಲೆ ಬೆದರಿಕೆ ಹಾಕಿರುವ ಕೇರಳ ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಸೋಮವಾರ ಆಗ್ರಹಿಸಿದೆ.
ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್, ರಾಹುಲ್ ಗಾಂಧಿಯ ಎದೆಗೆ ಗುಂಡು ಹಾರಿಸಲಾಗುವುದು ಎಂದು ಕೇರಳ ಬಿಜೆಪಿ ವಕ್ತಾರ ಪಿಂಟು ಮಹಾದೇವ್ ಅವರು ಹೇಳಿದ್ದು, ಈ ಕುರಿತು ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ಇದು ಯಾವುದೇ ನೇರ ಹೇಳಿಕೆ ಅಥವಾ ಅತಿಶಯೋಕ್ತಿಯಲ್ಲ. ನ್ಯಾಯಕ್ಕಾಗಿ ಹೋರಾಟದಲ್ಲಿ ಪ್ರತಿಯೊಬ್ಬ ಭಾರತೀಯನ ಜೊತೆ ನಿಲ್ಲುವ ನಾಯಕನಿಗೆ ಹಾಕಲಾಗುತ್ತಿರುವ ಕೊಲೆ ಬೆದರಿಕೆಯಾಗಿದೆ ಎಂದು ಹೇಳಿದೆ.
ಇದು ಕಾನೂನಿನ ನಿಯಮದ ಮೇಲೆ, ಪ್ರತಿಯೊಬ್ಬ ನಾಗರಿಕನಿಗೆ ಮತ್ತು ಪ್ರಜಾಪ್ರಭುತ್ವಕ್ಕೆ ಸುರಕ್ಷತೆ ಮತ್ತು ಭದ್ರತೆಯನ್ನು ಖಾತರಿಪಡಿಸುವ ಸಂವಿಧಾನದ ಮೇಲಿನ ನೇರ ದಾಳಿಯಾಗಿದೆ. ರಾಹುಲ್ ಗಾಂಧಿಯವರಿಗೆ ಹಲವಾರು ಸಂದರ್ಭಗಳಲ್ಲಿ ಜೀವ ಬೆದರಿಕೆ ಹಾಕಲಾಗಿದ್ದು, ಬಿಜೆಪಿಯ ಉದ್ದೇಶದ ಬಗ್ಗೆ ಗಂಭೀರ ಪ್ರಶ್ನೆಗಳು ಮೂಡುವಂತೆ ಮಾಡಿದೆ.
ಇದು ರಾಹುಲ್ ಗಾಂಧಿ ವಿರುದ್ಧ ರೂಪಿಸಲಾಗುತ್ತಿರುವ ಪಿತೂರಿಯೇ? ಬಿಜೆಪಿ ಕ್ರಿಮಿನಲ್ ಬೆದರಿಕೆ, ಹಿಂಸೆ ಮತ್ತು ಕೊಲೆ ಬೆದರಿಕೆಗಳನ್ನು ಬೆಂಬಲಿಸುತ್ತದೆಯೇ? ದುರಾಡಳಿತದ ವಿರುದ್ಧ ಧ್ವನಿ ಎತ್ತುವ ವಿರೋಧ ಪಕ್ಷದ ನಾಯಕರ ವಿರುದ್ಧ ಹಿಂಸಾಚಾರವನ್ನು ಸಾಮಾನ್ಯಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆಯೇ? ಇದಕ್ಕೆ ಬಿಜೆಪಿ ಉತ್ತರಿಸಬೇಕು.
ಕೂಡಲೇ ಪಿಂಟು ಮಹಾದೇವ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಹೇಳಿಕೆಗೆ ಬಿಜೆಪಿ ಖಂಡನೆ ವ್ಯಕ್ತಪಡಿಸಿ, ಸಾರ್ವಜನಿಕ ಕ್ಷಮೆಯಾಚಿಸಬೇಕು. ಹಾಗೆ ಮಾಡದಿದ್ದರೆ, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಈ ಹೇಯ ಕೃತ್ಯದಲ್ಲಿ ಭಾಗಿಯಾಗಿದ್ದಾರೆಂದು ನಂಬಲಾಗುತ್ತದೆ. ಯಾವುದೇ ಬೆದರಿಕೆ ಅಥವಾ ದಬ್ಬಾಳಿಕೆಯ ವಿರುದ್ಧ ನಮ್ಮ ದೇಶ ಒಗ್ಗಟ್ಟಿನಿಂದ ನಿಂತಿದೆ ಎಂದು ಹೇಳಿದೆ.
ಈ ಹಿಂದೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರೂ ಕೂಡ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪತ್ರ ಬರೆದಿದ್ದರು. ಬಿಜೆಪಿ ವಕ್ತಾರ ಪಿಂಟು ಮಹಾದೇವ್ ವಿರುದ್ದ ತ್ವರಿತವಾಗಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದರು.
ಕ್ರಮ ಕೈಗೊಳ್ಳದಿದ್ದರೆ, ಇದನ್ನು ಲೋಕಸಭೆ ವಿರೋಧ ಪಕ್ಷದ ನಾಯಕನ ವಿರುದ್ಧದ ಹಿಂಸಾಚಾರವನ್ನು ಕಾನೂನುಬದ್ಧಗೊಳಿಸಲಾಗುತ್ತಿದೆ ಎಂದು ನಿರ್ಣಯಿಸಲಾಗುತ್ತದೆ. ಇದು ನೀವು ಗೃಹ ಸಚಿವರಾಗಿ ತೆಗದುಕೊಂಡ ಪ್ರಮಾಣವಚನದ ಉಲ್ಲಂಘನೆಯಾಗಲಿದೆ ಎಂದು ಹೇಳಿದ್ದರು.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಪೋಸ್ಟ್ ಮಾಡಿರುವ ಅವರು, ರಾಜಕೀಯ ಕ್ಷೇತ್ರದಲ್ಲಿನ ಭಿನ್ನಾಭಿಪ್ರಾಯಗಳನ್ನು ರಾಜಕೀಯವಾಗಿ, ಸಾಂವಿಧಾನಿಕ ಚೌಕಟ್ಟಿನೊಳಗೆ ಪರಿಹರಿಸಿಕೊಳ್ಳಬೇಕು. ಆದರೆ, ಬಿಜೆಪಿ ನಾಯಕರು ನೇರ ಟಿವಿಯಲ್ಲಿ ತಮ್ಮ ರಾಜಕೀಯ ವಿರೋಧಿಗಳಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಖಂಡಿತವಾಗಿಯೂ, ಆರೆಸ್ಸೆಸ್-ಬಿಜೆಪಿ ಸಿದ್ಧಾಂತದ ವಿರುದ್ಧ ರಾಹುಲ್ ಗಾಂಧಿ ಅವರ ತೀವ್ರ ಹೋರಾಟ ಅವರನ್ನು ಕೆರಳಿಸಿದೆ ಎಂದು ತಿಳಿಸಿದ್ದರು.
ಬಿಜೆಪಿ ಎಲ್ಲಾ ಮಿತಿಗಳನ್ನು ಮೀರಿದೆ. ಈ ಕೊಲೆ ಬೆದರಿಕೆಯು ನಾಲಿಗೆಯ ಎಡವಟ್ಟಿನಿಂದ ಆದದ್ದಲ್ಲ, ಅಥವಾ ಅಸಡ್ಡೆಯಿಂದ ಕೂಡಿದ ಅತಿಶಯೋಕ್ತಿಯೂ ಅಲ್ಲ. ಇದು ವಿರೋಧ ಪಕ್ಷದ ನಾಯಕ ಮತ್ತು ಭಾರತದ ಪ್ರಮುಖ ರಾಜಕೀಯ ನಾಯಕರಲ್ಲಿ ಒಬ್ಬರ ವಿರುದ್ಧದ ತಣ್ಣನೆಯ, ಲೆಕ್ಕಾಚಾರದ ಮತ್ತು ತಣ್ಣಗಾಗಿಸುವ ಮಾರಣಾಂತಿಕ ಬೆದರಿಕೆ ಎಂದು ಹೇಳಿದ್ದರು.
ಆಡಳಿತ ಪಕ್ಷದ ಅಧಿಕೃತ ವಕ್ತಾರರು ಇಂತಹ ವಿಷಕಾರಿ ಮಾತುಗಳನ್ನು ಆಡಿರುವುದು ರಾಹುಲ್ ಗಾಂಧಿಯವರ ಜೀವಕ್ಕೆ ತಕ್ಷಣದ ಅಪಾಯ ತಂದೊಡ್ಡುವುದಲ್ಲದೆ, ಸಂವಿಧಾನ, ಕಾನೂನಿನ ನಿಯಮ ಮತ್ತು ಪ್ರತಿಯೊಬ್ಬ ನಾಗರಿಕರಿಗೂ ನೀಡಬೇಕಾದ ಮೂಲಭೂತ ಭದ್ರತಾ ಭರವಸೆಗಳನ್ನು ದುರ್ಬಲಗೊಳಿಸುತ್ತದೆ ಎಂದು ತಿಳಿಸಿದ್ದರು.