ರಾಜಸ್ಥಾನದ ಸಿಕಾರ್ ಜಿಲ್ಲೆಯ ಖೋರಿ ಬ್ರಹ್ಮಣನ್ ಗ್ರಾಮದಲ್ಲಿ ಉಚಿತ ಔಷಧ ಯೋಜನೆಯಡಿ ಕೆಮ್ಮಿನ ಸಿರಪ್ ಅನ್ನು ವಿತರಿಸಲಾಗಿತ್ತು. ಕೆಮ್ಮಿನ ಸಿರಪ್ ಸೇವಿಸಿದ್ದ 5 ವರ್ಷದ ಬಾಲಕ ಮಲಗಿದ್ದಾಗಲೇ ಮೃತಪಟ್ಟಿದ್ದಾನೆ. ಭರತ್‌ಪುರದಲ್ಲಿ, ಮತ್ತೊಬ್ಬ ಬಾಲಕ ಅದೇ ಸಿರಪ್ ಕುಡಿದ ನಂತರ ಪ್ರಜ್ಞೆ ತಪ್ಪಿ ಬಿದ್ದಿದ್ದು ಸದ್ಯ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಏತನ್ಮಧ್ಯೆ, ಮಧ್ಯಪ್ರದೇಶದ ಛಿಂದ್ವಾರಾದಲ್ಲಿ, ಆರು ಮಕ್ಕಳು "ನಿಗೂಢ ಕಾಯಿಲೆ"ಯಿಂದ ಸಾವನ್ನಪ್ಪಿದರು. ಇದರಿಂದಾಗಿ ಜಿಲ್ಲಾಧಿಕಾರಿ ಸಿರಪ್ ಬಳಕೆಯನ್ನು ನಿಷೇಧಿಸಿದ್ದಾರೆ. ಮಕ್ಕಳು "ಮೂತ್ರಪಿಂಡ ವೈಫಲ್ಯ"ದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ಸೆಪ್ಟೆಂಬರ್ 29ರಂದು ರಾತ್ರಿ 11:30ರ ಸುಮಾರಿಗೆ ಮಗುವಿಗೆ ಸಿರಪ್ ನೀಡಲಾಗಿತ್ತು ಎಂದು ಸಿಕಾರ್‌ನಲ್ಲಿರುವ ಮೃತ ಬಾಲಕನ ಪೋಷಕರು ತಿಳಿಸಿದ್ದಾರೆ. ಅವನು ಬೆಳಿಗ್ಗೆ ಎದ್ದೇಳಲಿಲ್ಲ. ಅವನನ್ನು ಸಿಕಾರ್‌ನ ಎಸ್‌ಕೆ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಮಗು ಮೃತಪಟ್ಟಿರುವುದಾಗಿ ಎಂದು ಘೋಷಿಸಿದರು. ಮರಣದ ನಿಖರವಾದ ಕಾರಣ ಮರಣೋತ್ತರ ಪರೀಕ್ಷೆಯ ವರದಿಯಿಂದ ಸ್ಪಷ್ಟವಾಗಲಿದೆ. ಮೃತ ಮಗುವಿನ ಚಿಕ್ಕಪ್ಪ ಬಸಂತ್ ಶರ್ಮಾ, ಸಿರಪ್ ನೀಡಿದ ನಂತರ ರಾತ್ರಿಯವರೆಗೆ ಎಲ್ಲವೂ ಸಾಮಾನ್ಯವಾಗಿತ್ತು ಎಂದು ಹೇಳಿದರು. ಆದರೆ ಬೆಳಗಿನ ಜಾವ 3:30ಕ್ಕೆ ಮಗುವಿಗೆ ಬಿಕ್ಕಳಿಕೆ ಬರಲು ಪ್ರಾರಂಭಿಸಿತು. ತಾಯಿ ಮಗುವಿಗೆ ನೀರು ಕೊಟ್ಟರು, ಆದರೆ ಬೆಳಗಿನ ಜಾವದವರೆಗೆ ಅವನು ಕಣ್ಣು ತೆರೆಯಲಿಲ್ಲ. ಆಸ್ಪತ್ರೆಗೆ ತಲುಪಿದಾಗ, ವೈದ್ಯರು ಅವನು ಸತ್ತಿದ್ದಾನೆಂದು ಘೋಷಿಸಿದರು. ಮರಣೋತ್ತರ ಪರೀಕ್ಷೆಯ ನಂತರ ಅಂತ್ಯಕ್ರಿಯೆ ನಡೆಯಿತು.
ಈ ಘಟನೆಯು ತಾಯಿಯನ್ನು ತೀವ್ರ ಆಘಾತಕ್ಕೀಡು ಮಾಡಿತು. ಮಗು ನಾಲ್ಕರಿಂದ ಐದು ದಿನಗಳ ಹಿಂದೆ ಕೆಮ್ಮಿನಿಂದ ಬಳಲುತ್ತಿತ್ತು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ತಾಯಿ ಮಗುವನ್ನು ಚಿರಾನಾ ಸಿಎಚ್‌ಸಿ ಆಸ್ಪತ್ರೆಗೆ ಕರೆದೊಯ್ದಿದ್ದಳು. ಅಲ್ಲಿ ಮಗುವಿಗೆ ಚಿಕಿತ್ಸೆ ನೀಡಿ ಸಿರಪ್ ನೀಡಲಾಯಿತು. ಸಿರಪ್ ಸೇವಿಸಿದ ನಂತರ, ಮಗುವಿನ ಸ್ಥಿತಿ ಹದಗೆಟ್ಟಿದ್ದು ಸಾವನ್ನಪ್ಪಿದ್ದಾನೆ. ಎಸ್‌ಕೆ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಕೆ.ಕೆ. ಅಗರ್ವಾಲ್ ಅವರು ಈ ಘಟನೆಯ ಕುರಿತು ತನಿಖೆ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿಯ ನಂತರ ಸಾವಿಗೆ ಕಾರಣ ಸ್ಪಷ್ಟವಾಗುತ್ತದೆ ಎಂದು ಹೇಳಿದ್ದಾರೆ.
ಭರತ್‌ಪುರದಲ್ಲಿ, ಸಿರಪ್ ಸೇವಿಸಿದ್ದ ಮಗುವಿನ ಸ್ಥಿತಿ ಗಂಭೀರ
ರಾಜಸ್ಥಾನ ಸರ್ಕಾರಿ ಆಸ್ಪತ್ರೆಗಳಲ್ಲಿ ವಿತರಿಸಲಾಗುತ್ತಿರುವ "ಡೆಕ್ಸ್ಟ್ರೋಮೆಥೋರ್ಫಾನ್ ಹೈಡ್ರೋಬ್ರೋಮೈಡ್ (13.5 ಮಿಗ್ರಾಂ/5 ಮಿಲಿ)" ಕೆಮ್ಮಿನ ಸಿರಪ್ ರೋಗಿಗಳಿಗೆ ಮಾರಕವಾಗಿದೆ ಎಂದು ಸಾಬೀತಾಗಿದೆ. ಸೆಪ್ಟೆಂಬರ್ 28 ರಂದು, ಭರತ್‌ಪುರ ಜಿಲ್ಲೆಯ ಬಯಾನಾ ಬ್ಲಾಕ್‌ನ ಕಲ್ಸಾಡಾ ಗ್ರಾಮದಲ್ಲಿ, ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಿಂದ ಸಿರಪ್ ಸೇವಿಸಿದ ನಂತರ 3 ವರ್ಷದ ಗಗನ್‌ನ ಆರೋಗ್ಯ ಹದಗೆಟ್ಟಿತು. ಮಗು ಪ್ರಜ್ಞೆ ತಪ್ಪಿತು ಮತ್ತು ಅವನ ಹೃದಯ ಬಡಿತ ನಿಯಂತ್ರಣಕ್ಕೆ ಬಂದಿಲ್ಲ. ಅವನನ್ನು ಜೈಪುರದ ಜೆಕೆ ಲೋನ್ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಅವನಿಗೆ ವೆಂಟಿಲೇಟರ್ ನೀಡಲಾಗಿದೆ. ಮಗು ಚಿಕಿತ್ಸೆ ಪಡೆಯುತ್ತಿದೆ.