ಚೆನ್ನೈ: ತಮಿಳುನಾಡಿನ ಕರೂರಿನಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ತನ್ನ ಯೂಟ್ಯೂಬ್ ಚಾನೆಲ್ ಮೂಲಕ ತಪ್ಪು ಮಾಹಿತಿ ಹರಡಿದ ಆರೋಪದ ಮೇಲೆ ಗ್ರೇಟರ್ ಚೆನ್ನೈನ ಸೈಬರ್ ಕ್ರೈಮ್ ಪೊಲೀಸರು ಮಂಗಳವಾರ ಯೂಟ್ಯೂಬರ್ ಫೆಲಿಕ್ಸ್ ಜೆರಾಲ್ಡ್ ಅವರನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಶನಿವಾರ ತಮಿಳಗ ವೆಟ್ರಿ ಕಳಗಂ(ಟಿವಿಕೆ) ರಾಜಕೀಯ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 41 ಜನ ಸಾವನ್ನಪ್ಪಿದ್ದು, 50 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.
ಜೆರಾಲ್ಡ್ ಅವರನ್ನು ಇಂದು ಬೆಳಗಿನ ಜಾವ ನುಂಗಂಬಾಕ್ಕಂನಲ್ಲಿರುವ ಅವರ ನಿವಾಸದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೆಡ್ ಪಿಕ್ಸ್‌ನಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೋದಲ್ಲಿ, ಅವರು ಘಟನೆಗೆ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಿದ್ದಾರೆ ಮತ್ತು ವಿಜಯ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸೋಮವಾರ, ಸಾಮಾಜಿಕ ಮಾಧ್ಯಮದಲ್ಲಿ ಕಾಲ್ತುಳಿತದ ಬಗ್ಗೆ ವದಂತಿಗಳನ್ನು ಹರಡಿದ ಆರೋಪದ ಮೇಲೆ ಬಿಜೆಪಿ ರಾಜ್ಯ ಕಲೆ ಮತ್ತು ಸಂಸ್ಕೃತಿ ಕಾರ್ಯದರ್ಶಿ ಸಗಾಯಂ(38) ಮತ್ತು ಟಿವಿಕೆ ಕಾರ್ಯಕರ್ತರಾದ ಮಾಂಗಾಡುವಿನ ಶಿವನೇಶ್ವರನ್(36) ಮತ್ತು ಅವಡಿಯ ಶರತ್ ಕುಮಾರ್ (32) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳು ಭಾಷೆಯ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿರುವ ಜೆರಾಲ್ಡ್ ಅವರನ್ನು ತನಿಖೆಯ ಭಾಗವಾಗಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಮತ್ತು ಪೊಲೀಸರ ವಿರುದ್ಧ 'ತಪ್ಪು ಮಾಹಿತಿ ಹರಡಿದ' ಆರೋಪದ ಮೇಲೆ 25 ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಉಳಿದ ಆರೋಪಿಗಳ ಬಂಧನ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದಲ್ಲಿ ಮತ್ತೊಬ್ಬ ಟಿವಿಕೆ ಕಾರ್ಯಕರ್ತನನ್ನು ಸಹ ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಆ ಕಾರ್ಯಕರ್ತನನ್ನು ಪಕ್ಷದ ಕರೂರ್ ಕೇಂದ್ರ ಜಿಲ್ಲಾ ಕಾರ್ಯದರ್ಶಿ ಕಾಸಿ ಪೌನ್‌ರಾಜ್ ಎಂದು ಗುರುತಿಸಲಾಗಿದೆ.