ನವದೆಹಲಿ: ಅಯೋಧ್ಯೆಯ ರಾಮಮಂದಿರ ದೇಣಿಗೆ ಅಕ್ರಮ ಆರೋಪವನ್ನು ಖಂಡಿಸಿ ಸಂಸತ್ತಿನ ಆವರಣದಲ್ಲಿ ಪೂರ್ಣಿಯಾದ ಪಕ್ಷೇತರ ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಅಯೋಧ್ಯೆಯ ರಾಮಲಲ್ಲಾನ ಫೋಟೋವನ್ನು ಪಪ್ಪು ಯಾದವ್ ಬಳಸಿದ್ದರು. ಈ ಸಂಬಂಧ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿತ್ತು. ಅಲ್ಲದೆ ದೆಹಲಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಸಂಬಂಧ ಇಂದು ಪಪ್ಪು ಯಾದವ್ ಸುದ್ದಿಗೋಷ್ಠಿ ನಡೆಸಲು ಮುಂದಾಗಿದ್ದು ಈ ವೇಳೆ ಅಲ್ಲಿ ಜಮಾಯಿಸಿದ್ದ ನೂರಾರು ಹಿಂದೂ ಕಾರ್ಯಕರ್ತರು ಪಪ್ಪು ಯಾದವ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ನಂತರ ಮಾತನಾಡಿದ ಪಪ್ಪು ಯಾದವ್ ನನ್ನ ಹತ್ಯೆಗೆ ಯತ್ನಿಸಿದರು ಎಂದು ಪಪ್ಪು ಯಾದವ್ ಆರೋಪಿಸಿದರು. ಗುಂಪಿನಲ್ಲಿದ್ದವರು ಚಾಕುವಿನಿಂದ ದಾಳಿಗೆ ಯತ್ನಿಸಿದ್ದರು ಎಂದು ಪಪ್ಪು ಯಾದವ್ ಆರೋಪಿಸಿದ್ದಾರೆ.
ಇನ್ನು ನಿನ್ನೆ ರಾಷ್ಟ್ರ ರಾಜಧಾನಿಯ ಜಹಾಂಗೀರ್‌ಪುರಿ ಪೊಲೀಸ್ ಠಾಣೆಯಲ್ಲಿ ಅರ್ಜಿದಾರ ಸೂರ್ಯ ಮೈಥಿಲ್ ಎಂಬುವರು ಪಪ್ಪು ಯಾದವ್ ವಿರುದ್ಧ ದೂರು ನೀಡಿದ್ದು, ಪ್ರತಿಭಟನೆಯ ಸಮಯದಲ್ಲಿ ಪಪ್ಪು ಯಾದವ್ ಸನಾತನ ಧರ್ಮ ಮತ್ತು ಧಾರ್ಮಿಕ ಚಿಹ್ನೆಗಳಿಗೆ ಅವಮಾನ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.