ನಾಗ್ಪುರ: 16 ವರ್ಷದ ಅಪ್ರಾಪ್ತ ಯುವತಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣ ಪತ್ತೆ ಮಾಡುವಲ್ಲಿ ಪೊಲೀಸರಿಗೆ ಆನ್ಲೈನ್ ಫುಡ್ ಆರ್ಡರ್ ನೆರವಾದ ಕುತೂಹಲಕಾರಿ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಹಿರಿಯ ಅಧಿಕಾರಿಯೊಬ್ಬರ ಪುತ್ರಿಯಾಗಿರುವ 12ನೇ ತರಗತಿಯ 16 ವರ್ಷದ ವಿದ್ಯಾರ್ಥಿನಿಯನ್ನು ನಾಗ್ಪುರದಲ್ಲಿ ಅಪಹರಿಸಿ, ಅತ್ಯಾಚಾರ ಎಸಗಿ, ಎರಡು ದಿನಗಳ ಕಾಲ ಕ್ರೂರವಾಗಿ ಹಿಂಸಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ 20 ವರ್ಷದ ವಿದ್ಯಾರ್ಥಿಯೊಬ್ಬ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಪೊಲೀಸರು ಬಾಲಕಿಯನ್ನು ರಕ್ಷಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಸಂತ್ರಸ್ತ ಬಾಲಕಿ ಇನ್‌ಸ್ಟಾಗ್ರಾಂ, ಸ್ನ್ಯಾಪ್‌ಚಾಟ್ ಹಾಗೂ ಕೆಲವು ಗೇಮಿಂಗ್ ವೇದಿಕೆಗಳ ಮೂಲಕ ಆರೋಪಿಯ ಸಂಪರ್ಕದಲ್ಲಿದ್ದಳು ಎನ್ನಲಾಗಿದೆ.
ಫ್ರೆಂಡ್‌ಶಿಪ್ ಡೇ ಪಾರ್ಟಿ ಹೆಸರಲ್ಲಿ ಅಪ್ರಾಪ್ತೆ ಅಪಹರಣ
ಈ ಘಟನೆ ಭಾನುವಾರ ನಡೆದಿದ್ದು, ಫ್ರೆಂಡ್‌ಶಿಪ್ ಡೇ ದಿನ ಆರಂಭವಾಗಿದೆ. ಬಾಲಕಿ ತನ್ನ ಸ್ನೇಹಿತೆಯೊಂದಿಗೆ ಮಾಲ್‌ಗೆ ಹೋಗುವುದಾಗಿ ಪೋಷಕರಿಗೆ ತಿಳಿಸಿ ಮನೆಯಿಂದ ಹೊರಟಿದ್ದಳು. ಆದರೆ ಬಹಳ ಸಮಯವಾದರೂ ಮನೆಗೆ ವಾಪಸ್ ಬರಲಿಲ್ಲ.
ಪೋಷಕರು ಆಕೆಯನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬಳಿಕ ಆಕೆ ಯಾವುದೇ ಸ್ನೇಹಿತರನ್ನು ಭೇಟಿಯಾಗಿರಲಿಲ್ಲ ಎಂಬುದು ಗೊತ್ತಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದರು.
ಪೊಲೀಸರು ಬಾಲಕಿಯ ಕರೆ ವಿವರಗಳು ಹಾಗೂ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಪರಿಶೀಲಿಸಿದಾಗ ಆರೋಪಿಯ ಮೇಲೆ ಅನುಮಾನ ಮೂಡಿತು.
ಆರೋಪಿಯ ಜಾಡು ಹಿಡಿದಿದ್ದು ಹೇಗೆ?
ತನಿಖೆಯಲ್ಲಿ ಆರೋಪಿ ಮಹಾರಾಷ್ಟ್ರದ ಥಾಣೆ ನಿವಾಸಿ ನಿರ್ಭಯ್ ಅಲಿಯಾಸ್ ಆಕಾಶ್ ಮಾಧವ್ ಪಾಖ್ರೆ ಎಂಬುದು ತಿಳಿದುಬಂದಿದೆ. ಆತ ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಓದುತ್ತಿದ್ದು, ನಾಗ್ಪುರದಲ್ಲಿ ಬಾಡಿಗೆ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದ.
ಆತನ ತಾಯಿ ಖ್ಯಾತ ವೈದ್ಯೆಯಾಗಿದ್ದಾರೆ. ಆತನ ಸಂಬಂಧಿಕರೊಬ್ಬರು ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದಾರೆ ಎಂಬ ವರದಿಗಳು ಹರಿದಾಡಿದ್ದರೂ, ಪೊಲೀಸರು ಈ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ.
ಬಳಿಕ ಪೊಲೀಸರು ಆರೋಪಿಯ ಮೊಬೈಲ್ ಸಂಖ್ಯೆ ಪಡೆದು ಆತನ ಕುಟುಂಬವನ್ನು ಸಂಪರ್ಕಿಸಿದರು. ಥಾಣೆ ಪೊಲೀಸರ ತಂಡ ಆರೋಪಿಯ ಮನೆಗೆ ತೆರಳಿ ಆತನ ಪೋಷಕರನ್ನು ಭೇಟಿಯಾಯಿತು. ಬಳಿಕ ಆತನ ತಾಯಿಗೆ ಮಗನಿಗೆ ಕರೆ ಮಾಡುವಂತೆ ಪೊಲೀಸರು ಸೂಚಿಸಿದರು.
ತನ್ನ ತಾಯಿಯೊಂದಿಗೆ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿರುವುದು ಆರೋಪಿಗೆ ತಿಳಿಯುತ್ತಿದ್ದಂತೆ ಆತ ಗಾಬರಿಗೊಂಡಿದ್ದಾನೆ. ಬಳಿಕ ಬಾಲಕಿಗೆ ತನ್ನ ಪೋಷಕರಿಗೆ ಕರೆ ಮಾಡಿ ತಾನು ಸುರಕ್ಷಿತವಾಗಿರುವುದಾಗಿ ಹೇಳುವಂತೆ ಒತ್ತಡ ಹೇರಿದ್ದಾನೆ. ಈ ಕರೆ ಮೂಲಕ ಪೊಲೀಸರು ಅವರು ಇರುವ ಸ್ಥಳದ ಸುಳಿವು ಪಡೆದುಕೊಂಡರು.
ಆರೋಪಿ ಪತ್ತೆಗೆ ನೆರವಾದ ಆನ್ಲೈನ್ ಫುಡ್ ಆರ್ಡರ್
ಇದರ ಕೆಲ ಸಮಯದ ಬಳಿಕ ಆರೋಪಿ ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡಿದ್ದಾನೆ. ಪೊಲೀಸರು ಫುಡ್ ಡೆಲಿವರಿ ಬಾಯ್ ಜೊತೆ ತೆರಳಿ ಆರ್ಡರ್ ಮಾಡಿದ್ದ ವಿಳಾಸವನ್ನು ಖಚಿತಪಡಿಸಿಕೊಂಡರು. ನಂತರ ನಾಗ್ಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಬಾಲಕಿಯನ್ನು ರಕ್ಷಿಸಿದರು.
ಕೊಂಚ ತಡವಾಗಿದ್ದರೂ ಸಂತ್ರಸ್ಥೆ ದುರಂತ ಸಾವು
ಪೊಲೀಸರು ಬಾಲಕಿಯನ್ನು ಬಂಧಿಸಿಟ್ಟಿದ್ದ ಸ್ಥಳದ ಬಾಗಿಲು ಒಡೆದು ಒಳನುಗ್ಗಿದಾಗ, ಆಕೆ ಗಾಯಗೊಂಡ ಸ್ಥಿತಿಯಲ್ಲಿ ಹಾಸಿಗೆಗೆ ಕಟ್ಟಿಹಾಕಲ್ಪಟ್ಟಿದ್ದಳು. ಆರೋಪಿಯ ಕೈಯಲ್ಲಿ ಚಾಕು ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ದೇಹದ ಮೇಲೆ ಹಲವು ಕತ್ತರಿಸಿದ ಹಾಗೂ ಇರಿತದ ಗಾಯಗಳಿದ್ದು, ಒಂದು ಕೈಯ ಮಣಿಕಟ್ಟಿನ ಭಾಗ ಕತ್ತರಿಸಲ್ಪಟ್ಟಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದರು. ಪೊಲೀಸರ ಪ್ರಕಾರ, ಕಾರ್ಯಾಚರಣೆಗೆ ಇನ್ನಷ್ಟು ತಡವಾಗಿದ್ದರೆ ಆರೋಪಿ ತಪ್ಪಿಸಿಕೊಳ್ಳಲು ಸಂತ್ರಸ್ಥೆಯನ್ನು ಕೊಲೆ ಮಾಡುವ ಸಾಧ್ಯತೆ ಇತ್ತು.
“ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಕಿಟಕಿಯಿಂದಲೇ ಭೀಕರ ಹಾಗೂ ಕ್ರೂರ ದೃಶ್ಯ ಕಂಡುಬಂದಿತು. ಸಂತ್ರಸ್ತೆಯನ್ನು ಎರಡು ದಿನಗಳ ಕಾಲ ಲೈಂಗಿಕವಾಗಿ ಹಾಗೂ ದೈಹಿಕವಾಗಿ ಹಿಂಸಿಸಲಾಗಿತ್ತು. ಆಕೆಯ ಕೈಯ ಒಂದು ಭಾಗ ಕತ್ತರಿಸಲ್ಪಟ್ಟಿತ್ತು. ಸ್ಥಳದಲ್ಲಿ ಹರಿತವಾದ ಚಾಕು ಪತ್ತೆಯಾಯಿತು. ಆರೋಪಿ ಆಕೆಯನ್ನು ಕೊಲ್ಲಲು ಸಿದ್ಧತೆ ನಡೆಸುತ್ತಿದ್ದ” ಎಂದು ವಲಯ 4ರ ಉಪ ಪೊಲೀಸ್ ಆಯುಕ್ತೆ ರಶ್ಮಿತಾ ರಾವ್ ತಿಳಿಸಿದ್ದಾರೆ.
ಆರೋಪಿ ಬಾಲಕಿಯ ಅಶ್ಲೀಲ ಫೋಟೋಗಳನ್ನು ತೆಗೆದುಕೊಂಡು ಅವುಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಬಾಲಕಿಯ ಇಡೀ ಕುಟುಂಬವನ್ನು ಕೊಲ್ಲುವುದಾಗಿಯೂ ಆತ ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪೋಕ್ಸೋ ಸೇರಿ ಹಲವು ಪ್ರಕರಣ
ಅತ್ಯಾಚಾರ, ಅಪಹರಣ ಹಾಗೂ ಕೊಲೆ ಯತ್ನ ಸೇರಿದಂತೆ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳಿಂದ ರಕ್ಷಣೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಅಥವಾ ಆರೋಪಿ ಇದೇ ರೀತಿಯಲ್ಲಿ ಬೇರೆ ಬಾಲಕಿಯರ ಮೇಲೂ ಲೈಂಗಿಕ ಹಾಗೂ ದೈಹಿಕ ದೌರ್ಜನ್ಯ ಎಸಗಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಾಲಕಿಯನ್ನು ಹಿಂಸಿಸಲು ಆರೋಪಿ ಬಳಸಿದ್ದ ಚಾಕು ಸೇರಿದಂತೆ ಇತರ ಸಾಕ್ಷ್ಯಾಧಾರಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಕೀಲರ ಭಿನ್ನವಾದ
ಆದರೆ ಆರೋಪಿಯ ವಕೀಲರು ವಿಭಿನ್ನ ವಾದ ಮಂಡಿಸಿದ್ದಾರೆ. ಆರೋಪಿ ಮತ್ತು ಬಾಲಕಿ ಪ್ರೇಮ ಸಂಬಂಧದಲ್ಲಿದ್ದ ಕಾರಣ ಒಟ್ಟಿಗೆ ಇದ್ದರು ಎಂದು ಅವರು ಹೇಳಿದ್ದಾರೆ. ಬಾಲಕಿಯೇ ತನ್ನ ಕೈಗೆ ಗಾಯ ಮಾಡಿಕೊಂಡಿದ್ದಾಳೆ ಎಂದು ವಕೀಲರು ವಾದಿಸಿದ್ದಾರೆ. ಅಲ್ಲದೆ, ಬಾಲಕಿ ತನ್ನ ಸ್ವಂತ ಇಚ್ಛೆಯಿಂದ ಆರೋಪಿಯ ಅಡಗುತಾಣಕ್ಕೆ ತೆರಳಿದ್ದಳು, ಅಪಹರಣದಲ್ಲಿ ಆರೋಪಿಯ ಯಾವುದೇ ಪಾತ್ರವಿಲ್ಲ ಎಂದು ಅವರು ಹೇಳಿದ್ದಾರೆ.
ಹಾಸಿಗೆ-ಸೊಳ್ಳೆ ನಿವಾರಕ ಬೇಕು ಎಂದ ಆರೋಪಿ
ಆರೋಪಿ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಪೊಲೀಸ್ ಕಸ್ಟಡಿಯಲ್ಲಿರುವ ಆತ ಆರಾಮದಾಯಕ ಹಾಸಿಗೆ ಹಾಗೂ ಸೊಳ್ಳೆ ನಿವಾರಕ ಬೇಕೆಂದು ಬೇಡಿಕೆ ಇಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತೀವ್ರ ಆಘಾತಕ್ಕೊಳಗಾಗಿರುವ ಸಂತ್ರಸ್ತ ಬಾಲಕಿಗೆ ಚಿಕಿತ್ಸೆ ಹಾಗೂ ಕೌನ್ಸೆಲಿಂಗ್ ನೀಡಲಾಗುತ್ತಿದೆ.