ತಿರುವನಂತಪುರಂ: ಕೇರಳದ ಕಾಸರಗೋಡು ಜಿಲ್ಲೆಯ ಶಾಲೆಗಳಲ್ಲಿ ಇತ್ತೀಚಿಗೆ ಆಯೋಜಿಸಿದ್ದ ರಸಪ್ರಶ್ನೆಯಲ್ಲಿ ಹಿಂದುತ್ವವಾದಿ ವಿ.ಡಿ. ಸಾವರ್ಕರ್ ಅವರನ್ನು ಬ್ರಿಟಿಷರಿಂದ ಅತ್ಯಂತ ಕಠಿಣ ಶಿಕ್ಷೆಗೆ ಗುರಿಯಾದ ಸ್ವಾತಂತ್ರ್ಯ ಹೋರಾಟಗಾರ" ಎಂದು ಬಣ್ಣಿಸುವ ಪ್ರಶ್ನೋತ್ತರ ವಿವಾದಕ್ಕೀಡಾಗುತ್ತಿದ್ದಂತೆಯೇ, ಶಾಲಾ ಶಿಕ್ಷಕರೊಬ್ಬರನ್ನು ಅಮಾನತುಗೊಳಿಸಲು ಕೇರಳದ ಸಾರ್ವಜನಿಕ ಶಿಕ್ಷಣ ಇಲಾಖೆ ಭಾನುವಾರ ಆದೇಶಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಶಾಲೆಗಳಲ್ಲಿ ಈ ಪ್ರಶ್ನಾವಳಿ ಬಳಸಲಾಗಿತ್ತು ಎನ್ನಲಾಗಿದೆ. ಈ ಸಂಬಂಧ ಕಾಸರಗೋಡಿನ ಕುಂಬ್ಳ ಉಪ-ಜಿಲ್ಲೆಯ ಪಲ್ಲತ್ತಡ್ಕದಲ್ಲಿರುವ 'ಏಡೆಡ್ ಅಪ್ಪರ್ ಪ್ರೈಮರಿ ಸ್ಕೂಲ್' (AUPS) ನ ಶಿಕ್ಷಕ ಗುರು ಪ್ರಸಾದ್ ಅವರನ್ನು ತಕ್ಷಣವೇ ಅಮಾನತುಗೊಳಿಸುವಂತೆ ಸಾರ್ವಜನಿಕ ಶಿಕ್ಷಣ ನಿರ್ದೇಶಕ ಸ್ನೇಹಿಲ್ ಕುಮಾರ್ ಸಿಂಗ್ ಆದೇಶ ಹೊರಡಿಸಿದ್ದಾರೆ.
ಈ ವಿವಾದದ ಕುರಿತು ತನಿಖೆ ನಡೆಸಿದ ನಂತರ ಕಾಸರಗೋಡಿನ ಶಿಕ್ಷಣ ಉಪ ನಿರ್ದೇಶಕರು ಸಲ್ಲಿಸಿದ ವರದಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅಂದಹಾಗೆ, ಕುಂಬ್ಳ ಮತ್ತು ಮಂಜೇಶ್ವರ ಉಪ-ಜಿಲ್ಲೆಗಳ ವ್ಯಾಪ್ತಿಯ ಕಿರಿಯ, ಹಿರಿಯ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಆಗಸ್ಟ್ 6 ರಂದು ಶಾಲಾ ಮಟ್ಟದ 'ಸಾಮಾಜಿಕ ವಿಜ್ಞಾನ ಕ್ಲಬ್ ಸ್ವಾತಂತ್ರ್ಯ ರಸಪ್ರಶ್ನೆ 2026' ಅನ್ನು ನಡೆಸಲಾಗಿತ್ತು. ಲೋವರ್ ಪ್ರೈಮರಿ ವಿಭಾಗದ ಪ್ರಶ್ನಾವಳಿಯಲ್ಲಿ 15 ಪ್ರಶ್ನೆಗಳು ಮತ್ತು ಐದು 'ಟೈ-ಬ್ರೇಕರ್' (ಸಮಾನ ಅಂಕಗಳಿದ್ದಾಗ ನಿರ್ಣಾಯಕವಾಗುವ) ಪ್ರಶ್ನೆಗಳನ್ನು ಒಳಗೊಂಡಿತ್ತು.
ಐದನೇ ಪ್ರಶ್ನೆಯಲ್ಲಿ, "ಬ್ರಿಟಿಷರಿಂದ ಅತ್ಯಂತ ಕಠಿಣ ಶಿಕ್ಷೆಗೆ ಗುರಿಯಾದ ಸ್ವಾತಂತ್ರ್ಯ ಹೋರಾಟಗಾರ ಯಾರು? ಎಂದು ಕೇಳಲಾಗಿತ್ತು ಮತ್ತು ಅದಕ್ಕೆ ಉತ್ತರವಾಗಿ ವಿ.ಡಿ. ಸಾವರ್ಕರ್ ಅವರ ಹೆಸರನ್ನು ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಶ್ನೆ ಮತ್ತು ಉತ್ತರ ವಿವಾದ ಮತ್ತು ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು. ಇದರಿಂದಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದರು. ಈ ವಿಷಯವು ಸಿಪಿಐ(ಎಂ) ಹಾಗೂ ಎಡಪಂಥೀಯ ವಿದ್ಯಾರ್ಥಿ ಮತ್ತು ಯುವ ಸಂಘಟನೆಗಳ ಟೀಕೆಗೆ ಗುರಿಯಾಗಿತ್ತು. ಶಿಕ್ಷಣ ಕ್ಷೇತ್ರದಲ್ಲಿ "ಸಂಘ ಪರಿವಾರದ ಅಜೆಂಡಾ" ಪ್ರವೇಶಿಸಲು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸರ್ಕಾರ ಅವಕಾಶ ನೀಡಿದೆ ಎಂದು ಈ ಸಂಘಟನೆಗಳು ಆರೋಪಿಸಿದವು.
ಯುಡಿಎಫ್ ಸರ್ಕಾರವು ಆರ್‌ಎಸ್‌ಎಸ್‌ನೊಂದಿಗೆ "ಶಾಮೀಲಾಗಿದೆ" ಎಂದು CPM ಹಿರಿಯ ನಾಯಕ ಪಿಣರಾಯಿ ವಿಜಯನ್ ಆರೋಪಿಸಿದ್ದರು. ಅಲ್ಲದೆ, ಸಾವರ್ಕರ್ ಅವರ "ನೈಜ ಇತಿಹಾಸ"ವನ್ನು ಮರೆಮಾಚಿ ಅವರನ್ನು ವೈಭವೀಕರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದೂ ಅವರು ದೂರಿದರು.
ಸಾರ್ವಜನಿಕ ಶಿಕ್ಷಣ ನಿರ್ದೇಶಕರ ಆದೇಶದ ಪ್ರಕಾರ, ಗುರು ಪ್ರಸಾದ್ ನೇತೃತ್ವದ ಶಿಕ್ಷಕರ ತಂಡವೊಂದು ಈ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿತ್ತು. ತನಿಖೆಯ ನಂತರ, ಇದಕ್ಕೆ ಕಾರಣರಾದ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಶಿಫಾರಸು ಮಾಡಿದ್ದಾರೆ.
ಕೇರಳ ಶಿಕ್ಷಣ ನಿಯಮಾವಳಿಗಳ ಅಡಿಯಲ್ಲಿ ಗುರು ಪ್ರಸಾದ್ ವಿರುದ್ಧ ಇಲಾಖಾ ಶಿಸ್ತು ಕ್ರಮವನ್ನು ಪ್ರಾರಂಭಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಶಾಲೆಯ ವ್ಯವಸ್ಥಾಪಕರಿಗೆ ಸೂಚಿಸಿದೆ. ಈ ವಿಷಯದ ಕುರಿತು ಸಮಗ್ರ ತನಿಖೆಗೆ ಇಲಾಖೆಯು ಆದೇಶಿಸಿದ್ದು, ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಕೈಗೊಂಡ ಕ್ರಮಗಳ ವರದಿಯನ್ನು ಸಲ್ಲಿಸುವಂತೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ನಿರ್ದೇಶನ ನೀಡಿದೆ.