ನವದೆಹಲಿ: ಸಂಸತ್ ಮುಂಗಾರು ಅಧಿವೇಶನದ 17ನೇ ದಿನವಾದ ಮಂಗಳವಾರವೂ ಆಡಳಿತಾರೂಢ ಎನ್‌ಡಿಎ ಹಾಗೂ ಪ್ರತಿಪಕ್ಷಗಳ ನಡುವಿನ ಸಂಘರ್ಷ ಮುಂದುವರಿದಿದೆ.
ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ನಡೆದ ಪೊಲೀಸ್ ಕ್ರಮದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿದ್ದು, ಆಡಳಿತ ಪಕ್ಷ ಚರ್ಚೆಗೆ ಸಿದ್ಧವಿದೆ ಎಂದು ಹೇಳಿದೆ.
ಮಂಗಳವಾರ ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡಿಸಿರುವ ಎರಡು ಪ್ರಮುಖ ಮಸೂದೆಗಳನ್ನು ಪರಿಗಣಿಸಿ ಅಂಗೀಕರಿಸುವ ಸಾಧ್ಯತೆಯಿದೆ.
ಕೇರಳ (ಹೆಸರು ಬದಲಾವಣೆ) ಮಸೂದೆ, 2026 ಹಾಗೂ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (ತಿದ್ದುಪಡಿ) ಮಸೂದೆ, 2026 ಪ್ರಮುಖ ಮಸೂದೆಗಳಾಗಿವೆ.
ಲೋಕಸಭೆ ಕಲಾಪ ಮಧ್ಯಾಹ್ನ 2ಕ್ಕೆ ಮುಂದೂಡಿಕೆ
ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಪಕ್ಷ ಸದಸ್ಯರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಲೋಕಸಭೆಯ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು.
ಸದನ ಕಾರ್ಯನಿರ್ವಹಿಸಬೇಕು, ಸರ್ಕಾರ-ವಿಪಕ್ಷಗಳು ಒಟ್ಟಾಗಿ ಬರಬೇಕು: ಸ್ಪೀಕರ್ ಓಂ ಬಿರ್ಲಾ
ಈ ನಡುವ ಸದನದ ರಚನಾತ್ಮಕ ಚರ್ಚೆ ಮತ್ತು ಸುಗಮ ಕಾರ್ಯನಿರ್ವಹಣೆಗಾಗಿ ಸರ್ಕಾರ ಮತ್ತು ವಿರೋಧ ಪಕ್ಷಗಳು ಒಟ್ಟಾಗಿ ಬರಬೇಕೆಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಒತ್ತಾಯಿಸಿದ್ದಾರೆ.
ಇದೇ ವೇಳೆ ಪ್ರತಿಭಟನಾ ನಿರತ ವಿರೋಧ ಪಕ್ಷದ ಸದಸ್ಯರಿಗೆ ಸದನದಲ್ಲಿ ಫಲಕಗಳನ್ನು ಪ್ರದರ್ಶಿಸುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.
‘ಕೇರಳ’ ಬದಲು ‘ಕೇರಳಂ’?
ಕೇರಳ (ಹೆಸರು ಬದಲಾವಣೆ) ಮಸೂದೆ, 2026ರ ಮೂಲಕ ಸಂವಿಧಾನದ ಮೊದಲ ಅನುಸೂಚಿಗೆ ತಿದ್ದುಪಡಿ ತಂದು ರಾಜ್ಯದ ಅಧಿಕೃತ ಹೆಸರನ್ನು ‘ಕೇರಳ’ದಿಂದ ‘ಕೇರಳಂ’ ಎಂದು ಬದಲಾಯಿಸುವ ಪ್ರಸ್ತಾವನೆ ಇದೆ.
2024ರ ಜೂನ್‌ನಲ್ಲಿ ಕೇರಳ ವಿಧಾನಸಭೆ ಸರ್ವಾನುಮತದಿಂದ ಹೆಸರಿನ ಬದಲಾವಣೆಗೆ ನಿರ್ಣಯ ಅಂಗೀಕರಿಸಿತ್ತು. ಬಳಿಕ 2026ರ ಫೆಬ್ರವರಿಯಲ್ಲಿ ಕೇಂದ್ರ ಸಚಿವ ಸಂಪುಟವೂ ಪ್ರಸ್ತಾವನೆಗೆ ಅನುಮೋದನೆ ನೀಡಿತ್ತು. ಸೋಮವಾರ ಲೋಕಸಭೆಯಲ್ಲಿ ಮಸೂದೆ ಮಂಡನೆಯಾಗಿದ್ದು, ಮಂಗಳವಾರ ಪರಿಗಣಿಸಿ ಅಂಗೀಕರಿಸಲು ನಿಗದಿಯಾಗಿದೆ.
ಸಹಕಾರಿ ಕ್ಷೇತ್ರಕ್ಕೆ ಮತ್ತಷ್ಟು ನೆರವು
ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (ತಿದ್ದುಪಡಿ) ಮಸೂದೆ, 2026 ಮೂಲಕ 1962ರ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ.
ಸಹಕಾರಿ ಸಂಘಗಳಿಗೆ ಹಣಕಾಸು ನೆರವು ನೀಡುವ ಪ್ರಕ್ರಿಯೆಯನ್ನು ಹೆಚ್ಚು ವೇಗವಾಗಿ ಮತ್ತು ಸುಗಮಗೊಳಿಸುವುದು ಹಾಗೂ ಸಹಕಾರಿ ಕ್ಷೇತ್ರಕ್ಕೆ ಬೆಂಬಲ ನೀಡುವಲ್ಲಿ ನಿಗಮದ ಹಣಕಾಸು ಪಾತ್ರವನ್ನು ವಿಸ್ತರಿಸುವುದು ಮಸೂದೆಯ ಪ್ರಮುಖ ಉದ್ದೇಶವಾಗಿದೆ.
ವಿದ್ಯಾರ್ಥಿಗಳ ಪ್ರತಿಭಟನೆ ವಿಚಾರಕ್ಕೆ ಸಂಸತ್‌ನಲ್ಲಿ ಗದ್ದಲ
NEET ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಕ್ರಮದ ವಿಚಾರವು ಮುಂಗಾರು ಅಧಿವೇಶನದಲ್ಲಿ ಪ್ರಮುಖ ವಿವಾದವಾಗಿ ಮುಂದುವರಿದಿದೆ.
ಈ ಕುರಿತು ಅಮಿತ್ ಶಾ ಸಂಸತ್‌ನಲ್ಲಿ ಹೇಳಿಕೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಸೋಮವಾರವೂ ಇದೇ ವಿಚಾರವಾಗಿ ಉಭಯ ಸದನಗಳಲ್ಲಿ ಗದ್ದಲ ಉಂಟಾಗಿತ್ತು.
ಎನ್‌ಡಿಎ ಸಂಸದರ ಪ್ರತಿಭಟನಾ ಮೆರವಣಿಗೆ
ಪ್ರತಿಪಕ್ಷಗಳ ನಿರಂತರ ಪ್ರತಿಭಟನೆ ಹಾಗೂ ಸಂಸತ್ ಕಲಾಪಕ್ಕೆ ಅಡ್ಡಿಪಡಿಸುತ್ತಿರುವುದನ್ನು ಖಂಡಿಸಿ ಎನ್‌ಡಿಎ ಸಂಸದರು ಮಂಗಳವಾರ ಸಂಸತ್ ಭವನದತ್ತ ಪ್ರತಿಭಟನಾ ಮೆರವಣಿಗೆ ನಡೆಸಿದರು.
ವಿದ್ಯಾರ್ಥಿಗಳ ಪ್ರತಿಭಟನೆ ಹಾಗೂ ಪೊಲೀಸ್ ಕ್ರಮದ ಕುರಿತು ಚರ್ಚೆಯಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಿಂದೆ ಸರಿಯುತ್ತಿದ್ದಾರೆ ಎಂದು ಎನ್‌ಡಿಎ ಸದಸ್ಯರು ಆರೋಪಿಸಿದರು.
ಬಿಜೆಪಿ ಸಂಸದೆ ಕಂಗನಾ ರಣಾವತ್, ಪ್ರತಿಪಕ್ಷಗಳು ಮೊದಲು ಚರ್ಚೆಗೆ ಒತ್ತಾಯಿಸಿ ಇದೀಗ ಹಿಂದೆ ಸರಿದಿವೆ ಎಂದು ಆರೋಪಿಸಿದರು.
ಬಿಜೆಪಿ ಸಂಸದ ಸಂಜಯ್ ಜೈಸ್ವಾಲ್, “ನಾವು ಚರ್ಚೆಗೆ ಸಿದ್ಧ, ಆದರೆ ರಾಹುಲ್ ಗಾಂಧಿ ಸಿದ್ಧರಿಲ್ಲ” ಎಂದು ಹೇಳಿದರು.
ಬಿಜೆಪಿ ಸಂಸದ ಮನೋಜ್ ತಿವಾರಿ, “ಅಮಿತ್ ಶಾ ಜೀ ಉತ್ತರ ನೀಡುತ್ತಾರೆ, ರಾಹುಲ್ ಗಾಂಧಿ ಓಡಿಹೋಗಬೇಡಿ” ಎಂದು ಟೀಕಿಸಿದರು.
‘ರಾಹುಲ್ ಗಾಂಧಿ ಓಡಿ ಹೋಗಬಾರದು’: ಕಿರಣ್ ರಿಜಿಜು
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಕೂಡ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, ತಾವು ಎತ್ತಿರುವ ಪ್ರಶ್ನೆಗಳಿಗೆ ಗೃಹ ಸಚಿವ ಅಮಿತ್ ಶಾ ಉತ್ತರಿಸಲು ಸಿದ್ಧರಾಗಿರುವಾಗ ರಾಹುಲ್ ಗಾಂಧಿ ಸಂಸತ್‌ನಿಂದ “ಓಡಿ ಹೋಗಬಾರದು” ಎಂದು ಹೇಳಿದ್ದಾರೆ.
‘ಮಂಗಳ ಮಿಲನ’ ಸಭೆಯಲ್ಲಿ ಮೋದಿ, ಶಾ ಭಾಗಿ
ಇದೇ ವೇಳೆ ಸಂಸತ್ ಭವನದ ಗ್ರಂಥಾಲಯ ಕಟ್ಟಡದಲ್ಲಿ ನಡೆದ ಎನ್‌ಡಿಎ ಸಂಸದೀಯ ಪಕ್ಷದ ‘ಮಂಗಳ ಮಿಲನ’ ಸಭೆಯಲ್ಲಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ಜೆ.ಪಿ. ನಡ್ಡಾ, ಬಿಜೆಪಿ ಅಧ್ಯಕ್ಷ ನಿತಿನ್ ನಬೀನ್ ಸೇರಿದಂತೆ ಎನ್‌ಡಿಎಯ ಹಲವು ನಾಯಕರು ಭಾಗವಹಿಸಿದರು.