ಅಮೆರಿಕದ ನ್ಯಾಯಾಲಯವು ಕೈಗಾರಿಕೋದ್ಯಮಿ ಗೌತಮ್ ಅದಾನಿ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ವಜಾಗೊಳಿಸಿದ ಬೆನ್ನಲ್ಲೇ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಕಣ್ಣಿಗೆ ಕಾಣುವುದಕ್ಕಿಂತ ಈ ಪ್ರಕರಣದಲ್ಲಿ ಇನ್ನೂ ಹೆಚ್ಚಿನ ಸಂಗತಿಗಳಿವೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು, ರಾಜಿ ಮಾಡಿಕೊಂಡಿರುವ ಪ್ರಧಾನಿ ಭಾರತದ ಹಿತಾಸಕ್ತಿಯನ್ನು ಮಾರಾಟ ಮಾಡುವಂತೆ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಅಮೆರಿಕದ ಫೆಡರಲ್ ನ್ಯಾಯಾಧೀಶರು ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ವಿರುದ್ಧದ ಭದ್ರತಾ ವಂಚನೆ ಪಿತೂರಿ, ವೈರ್ ವಂಚನೆ ಪಿತೂರಿ ಹಾಗೂ ಭದ್ರತಾ ವಂಚನೆ ಸೇರಿದಂತೆ ಕ್ರಿಮಿನಲ್ ಆರೋಪಗಳನ್ನು ಶಾಶ್ವತವಾಗಿ ವಜಾಗೊಳಿಸಿದ ಬಳಿಕ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.
ಅಮೆರಿಕದ ನ್ಯಾಯಾಲಯದ ಆದೇಶಕ್ಕೆ ಸಂಬಂಧಿಸಿದ ಸುದ್ದಿ ವರದಿಯೊಂದನ್ನು ಹಂಚಿಕೊಂಡು ರಾಹುಲ್ ಗಾಂಧಿ ‘ಎಕ್ಸ್’ನಲ್ಲಿ, “ಕಣ್ಣಿಗೆ ಕಾಣುವುದಕ್ಕಿಂತ ಈ ಪ್ರಕರಣದಲ್ಲಿ ಇನ್ನೂ ಹೆಚ್ಚಿನ ಸಂಗತಿಗಳಿವೆ. ರಾಜಿ ಮಾಡಿಕೊಂಡಿರುವ ಪ್ರಧಾನಿಯನ್ನು ಭಾರತದ ಹಿತಾಸಕ್ತಿಯನ್ನು ಮಾರಾಟ ಮಾಡುವಂತೆ ಒತ್ತಾಯಿಸಲಾಗಿದೆ. ಭಾರತ ಇದಕ್ಕೆ ಭಾರೀ ಬೆಲೆ ತೆರಬೇಕಾಗಿದೆ,” ಎಂದು ಪೋಸ್ಟ್ ಮಾಡಿದ್ದಾರೆ.