ಚಿಪ್ಸ್ ತಿನ್ನೋ ಮುನ್ನ ಎಚ್ಚರ AI Image
ದೇಶ

ಚಿಪ್ಸ್ ತಿನ್ನೋ ಮುನ್ನ ಎಚ್ಚರ; ಜಂಕ್ ಫುಡ್ ಪ್ಯಾಕೆಟ್ ಮೇಲೆ ಎಚ್ಚರಿಕೆ ಲೇಬಲ್ ಕಡ್ಡಾಯ ಎಂದು ಸುಪ್ರೀಂ ಆದೇಶ!

ಮಕ್ಕಳಿಗೆ ಇಷ್ಟವೆಂದು ಅಂಗಡಿಯಿಂದ ತಂದುಕೊಡುವ ಪ್ಯಾಕೆಟ್ ತಿಂಡಿಯಲ್ಲಿ ಎಷ್ಟು ಪ್ರಮಾಣದ ಸಕ್ಕರೆ, ಉಪ್ಪು, ಕೊಬ್ಬು ಇದೆ ಎಂದು ಎಂದಾದರೂ ಗಮನಿಸಿದ್ದೀರಾ? ಇನ್ಮುಂದೆ ಆ ಸಣ್ಣ ಅಕ್ಷರಗಳನ್ನು ಓದಲು ಪರದಾಡಬೇಕಿಲ್ಲ. ಯಾಕಂದ್ರೆ, ಜಂಕ್ ಫುಡ್ ಪ್ಯಾಕೆಟ್ ಮೇಲೆ ಎಚ್ಚರಿಕೆ ಲೇಬಲ್ ಕಡ್ಡಾಯ ಎಂದು ಸುಪ್ರೀಂ ಆದೇಶ!

ನವದೆಹಲಿ: ನೀವು ಬಾಯಿಚಪ್ಪರಿಸಿ ತಿನ್ನುವ ಚಿಪ್ಸ್, ಬಿಸ್ಕೆಟ್ ಪ್ಯಾಕೆಟ್‌ನಲ್ಲಿ ನಿಮ್ಮ ಆರೋಗ್ಯವನ್ನೇ ಹಾಳುಮಾಡುವ ಅಂಶಗಳಿವೆಯಾ? ಇಷ್ಟು ದಿನ ಕಂಪನಿಗಳು ಪ್ಯಾಕೆಟ್‌ನ ಹಿಂಭಾಗದಲ್ಲಿ ಅಡಗಿಸಿಡುತ್ತಿದ್ದ ಆ ಸತ್ಯಗಳು ಇನ್ನು ಮುಂದೆ ನೇರವಾಗಿ ನಿಮ್ಮ ಕಣ್ಣ ಮುಂದೆ ಬರಲಿವೆ.! ಹೌದು, ಜಂಕ್ ಫುಡ್ ಕಂಪನಿಗಳ ಜಾಣ ಆಟಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದ್ದು, ಗ್ರಾಹಕರ ಆರೋಗ್ಯ ರಕ್ಷಣೆಗೆ ಮಹತ್ವದ ಆದೇಶ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ಹೌದು, ಜಂಕ್ ಫುಡ್ ಹಾಗೂ ಸಂಸ್ಕರಿಸಿದ ಆಹಾರ ಪೊಟ್ಟಣಗಳ ಮೇಲೆ ಎಚ್ಚರಿಕೆ ಲೇಬಲ್ ಅಳವಡಿಸುವ ವಿಚಾರದಲ್ಲಿ ವಿಳಂಬ ಮಾಡುತ್ತಿರುವ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಅದರಂತೆ, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಈ ನಿಯಮವನ್ನು ಅಂತಿಮಗೊಳಿಸಲು ಕೇಂದ್ರ ಸರ್ಕಾರಕ್ಕೆ ಕೇವಲ 2 ವಾರಗಳ ಕಡುಕಟ್ಟಿನ ಗಡುವು ನೀಡಿದೆ.

ಕಾರ್ಪೊರೇಟ್ ಒತ್ತಡಕ್ಕೆ ಮಣಿದಿರಾ?

ಆಹಾರ ಪೊಟ್ಟಣಗಳ ಮುಂಭಾಗದಲ್ಲಿ ಎಚ್ಚರಿಕೆ ಲೇಬಲ್ ಹಾಕುವ ನಿಯಮ ತರಲು FSSAI ಹಿಂದೇಟು ಹಾಕುತ್ತಿರುವುದನ್ನು ಗಮನಿಸಿದ ಕೋರ್ಟ್, "ನೀವು ದೊಡ್ಡ ಆಹಾರ ಉತ್ಪಾದನಾ ಕಂಪನಿಗಳ ಒತ್ತಡಕ್ಕೆ ಮಣಿಯುತ್ತಿದ್ದೀರಾ?" ಎಂದು ನೇರವಾಗಿಯೇ ಪ್ರಶ್ನಿಸಿದೆ. ಇದರೊಂದಿಗೆ, ನಿಮ್ಮ ಮನೆಯಲ್ಲಿ ಮೊಮ್ಮಕ್ಕಳಿಲ್ಲವೇ? ದೇಶದ ಪ್ರಜೆಗಳು, ಅದರಲ್ಲೂ ಮುಖ್ಯವಾಗಿ ಚಿಪ್ಸ್, ಮ್ಯಾಗಿಯಂತಹ ಜಂಕ್ ಫುಡ್‌ಗಳಿಗೆ ದಾಸರಾಗುತ್ತಿರುವ ಸಣ್ಣ ಮಕ್ಕಳು ಆರೋಗ್ಯವಾಗಿ ಬೆಳೆಯುವುದು ನಿಮಗೆ ಇಷ್ಟವಿಲ್ಲವೇ? ಎಂದು ನ್ಯಾಯಾಧೀಶರು ಆಕ್ರೋಶ ಹೊರಹಾಕಿದ್ದಾರೆ.

ಹೊಸ ನಿಯಮದ ಪ್ರಕಾರ ಪ್ಯಾಕೆಟ್ ಮೇಲೆ ಏನಿರಬೇಕು?

ಸಾರ್ವಜನಿಕ ಸೇವಾ ಟ್ರಸ್ಟ್ 3S ಆಂಡ್ ಅವರ್ ಹೆಲ್ತ್ ಸೊಸೈಟಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, ಜಂಕ್ ಫುಡ್ ಪ್ಯಾಕೆಟ್‌ಗಳ ಮುಂಭಾಗದಲ್ಲೇ ಕಣ್ಣಿಗೆ ಕಾಣುವಂತೆ "ಅತಿ ಹೆಚ್ಚು ಸಕ್ಕರೆ", "ಅತಿ ಹೆಚ್ಚು ಉಪ್ಪು" ಮತ್ತು "ಅತಿ ಹೆಚ್ಚು ಸ್ಯಾಚುರೇಟೆಡ್ ಫ್ಯಾಟ್" ಎಂದು ಸ್ಪಷ್ಟವಾಗಿ ಮುದ್ರಿಸಬೇಕು. ಎಂದು ಕೋರ್ಟ್ ತಿಳಿಸಿದೆ.

ಮತ್ತೊಂದೆಡೆ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್, ಅಂತಾರಾಷ್ಟ್ರೀಯ ನಿಯಮಗಳನ್ನು ಭಾರತದಲ್ಲಿ ಜಾರಿಗೊಳಿಸಿದರೆ ನಮ್ಮ ದೇಶದ ಸಾಂಪ್ರದಾಯಿಕ ತಿಂಡಿಗಳಾದ 'ನಮ್ಕೀನ್', ಮಿಕ್ಸ್ಚರ್ ಹಾಗೂ ಮೊಟ್ಟೆಗಳ ಮೇಲೆಯೂ ಕೆಂಪು ಬಣ್ಣದ ಎಚ್ಚರಿಕೆ ಮುದ್ರೆ ಒತ್ತಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ, ಭಾರತದ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಆದಾಯದ ಮೂರನೇ ಒಂದು ಭಾಗ ಇಂತಹ ಸಾಂಪ್ರದಾಯಿಕ ಆಹಾರ ಪದಾರ್ಥಗಳಿಂದ ಬರುತ್ತದೆ. ಈ ನಿಯಮದಿಂದ ಉದ್ಯಮಕ್ಕೆ ತೊಂದರೆಯಾಗಬಹುದು ಎಂದು ಸರ್ಕಾರ ಕೋರ್ಟ್ ಗಮನಕ್ಕೆ ತಂದಿತು.

ಇದಕ್ಕೆ ಉತ್ತರಿಸಿದ ಕೋರ್ಟ್, "ಎಚ್ಚರಿಕೆ ಲೇಬಲ್ ಹಾಕುವುದೆಂದರೆ ಆ ಉತ್ಪನ್ನವನ್ನು ನಿಷೇಧಿಸುವುದು ಎಂದರ್ಥವಲ್ಲ. ಜನರು ತಾವೇನು ತಿನ್ನುತ್ತಿದ್ದಾರೆ ಎಂಬ ಜಾಗೃತಿ ಮೂಡಿಸುವುದು ಮಾತ್ರ ಇದರ ಉದ್ದೇಶ" ಎಂದು ಸ್ಪಷ್ಟಪಡಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕೇಂದ್ರ ಅದೊಂದು ಕೆಲಸ ಮಾಡದಿದ್ದರೆ... PoK ಜಮ್ಮು ಮತ್ತು ಕಾಶ್ಮೀರದೊಂದಿಗೆ ಸೇರುತ್ತಿತ್ತು': ಒಮರ್ ಅಬ್ದುಲ್ಲಾ

ಗುಡ್‌ನ್ಯೂಸ್: ಪೆಟ್ರೋಲ್, ಡೀಸೆಲ್, ATF ಮೇಲಿನ ತೆರಿಗೆ ಇಳಿಕೆ

ಸ್ವಾತಂತ್ರ್ಯ ದಿನಾಚರಣೆ ವೇಳೆ ಜಾರ್ಖಂಡ್ ನಲ್ಲಿ ಹೈಡ್ರಾಮಾ: ತಿರಂಗಾ ಯಾತ್ರೆಗೆ ತೆರಳದಂತೆ JLKM ನಾಯಕನ ತಡೆದ ಪೊಲೀಸರು, Video

ಜಾತಿ, ಧಾರ್ಮಿಕ ತಡೆಗೋಡೆ ಮುರಿಯುವುದು ನಿಜವಾದ ಸ್ವಾತಂತ್ರ್ಯ: ತಮಿಳುನಾಡು ಸಿಎಂ ಆಗಿ ವಿಜಯ್ ಮೊದಲ ಸ್ವಾತಂತ್ರ್ಯದಿನಾಚರಣೆಯ ಭಾಷಣ!

ನಾನು ಪ್ರಶಾಂತ್ ಕಿಶೋರ್ ರಾಜಕೀಯ ಬೆಂಬಲಿಸುತ್ತೇನೆ, ಆದರೆ ಅವರ ಭವಿಷ್ಯ ಸವಾಲಿನಿಂದ ಕೂಡಿದೆ: ಕೇಂದ್ರ ಸಚಿವ ಚಿರಾಗ್ ಪಾಸ್ವಾನ್